ಕರ್ನಾಟಕ

ಬೆಡ್ ಬ್ಲಾಕಿಂಗ್ ದಂಧೆ: ಬೆಂಗಳೂರಿನ ಇಬ್ಬರು ಡಾಕ್ಟರ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು

Pinterest LinkedIn Tumblr

ಬೆಂಗಳೂರು: ಕರ್ನಾಟಕದ ಕೊರೋನಾ ಹಬ್ ಆಗಿ ಬದಲಾಗುತ್ತಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದು, ಕೆಲವರು ಸಾವನ್ನಪ್ಪಿರುವ ಘಟನೆಯೂ ನಡೆದಿದೆ. ಈ ನಡುವೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದಿದ್ದಾರೆ. ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಸಿಸಿಬಿ ತನಿಖೆಗೆ ಆದೇಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಡಾಕ್ಟರ್ ಸೇರಿದಂತೆ 8 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ರಾತ್ರಿಯೇ 8 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಇಬ್ಬರು ಬಿಬಿಎಂಪಿ ಡಾಕ್ಟರ್​ಗಳು, ಡೇಟಾ ಎಂಟ್ರಿ ಆಪರೇಟರ್​ಗಳು ಮತ್ತು ಅಸಿಸ್ಟೆಂಟ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಡ್ ದಂಧೆಯಲ್ಲಿ ಡಾಕ್ಟರ್ ಗಳ ಪಾತ್ರದ ಬಗ್ಗೆ ತನಿಖೆ ನಡೆಸಲಾಗಿದೆ. ಸದ್ಯ ಇಬ್ಬರು ಡಾಕ್ಟರ್ ಸೇರಿದಂತೆ 8 ಮಂದಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಜಯನಗರ ಪೊಲೀಸರಿಂದ ನೇತ್ರಾವತಿ ಮತ್ತು ರೋಹಿತ್ ಅವರನ್ನು ಬಂಧಿಸಲಾಗಿದೆ. 3 ಬೆಡ್ ಕೊಡಿಸಿ ಹಣ ವಸೂಲಿ ಮಾಡಿದ್ದ ಇಬ್ಬರು ಆರೋಪಿಗಳು ಒಟ್ಟು 1.7 ಲಕ್ಷ ರೂ. ವಸೂಲಿ ಮಾಡಿದ್ದರು. ಎರಡು ಬೆಡ್ ಗೆ ತಲಾ 40,000 ರೂ. ಮತ್ತೊಂದು ಬೆಡ್ ಗೆ 27,000 ರೂ. ವಸೂಲಿ ಮಾಡಿದ್ದ ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ.

ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಕಾರ್ಯಾಚರಣೆ ಮಾಡಿದ್ದ ಜಯನಗರ ಇನ್ಸ್‌ಪೆಕ್ಟರ್ ಸುದರ್ಶನ್ ಪ್ರಕರಣ ಸಂಬಂಧ ನೇತ್ರಾವತಿ ಮತ್ತು ರೋಹಿತ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣ ಸಂಬಂಧ‌ ಜಯನಗರ ಪೊಲೀಸರಿಂದ ವಿಚಾರಣೆ ಮುಂದುವರಿದಿದೆ.

ನಿನ್ನೆ ಬೆಂಗಳೂರಿನ ಆಸ್ಪತ್ರೆಗಳ ಬೆಡ್ ದಂಧೆಯನ್ನು ಬಯಲಿಗೆಳೆದಿದ್ದ ಸಂಸದ ತೇಜಸ್ವಿ ಸೂರ್ಯ, ಸೋಂಕಿತರ ಮಾಹಿತಿ ಪಡೆದು ಅವರ ಹೆಸರಿನಲ್ಲಿ 12 ಬೇರೆ ಬೇರೆ ಆಸ್ಪತ್ರೆಯಲ್ಲಿ ಬೆಡ್ ಬುಕ್ ಮಾಡಲಾಗುತ್ತಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಬೆಡ್ ಬುಕ್ ಆಗುತ್ತದೆ. ರಾತ್ರೋ ರಾತ್ರಿ ಬೆಡ್ ಬುಕ್ ಮಾಡೋ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದರು.

ಬಿಎಂಪಿ ದಕ್ಷಿಣ ವಲಯದ ಕೋವಿಡ್​ ವಾರ್​ ರೂಂ ಅಧಿಕಾರಿಗಳು ಸೇರಿದಂತೆ ಅನೇಕರ ಹೆಸರಿನಲ್ಲಿ ಸುಮಾರು 4,000ಕ್ಕೂ ಹೆಚ್ಚು ಬೆಡ್​ಗಳನ್ನು ಬುಕ್​ ಮಾಡಿದ್ದು, ಇವುಗಳನ್ನು ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇವರೆಲ್ಲಾ ಐಸಿಯು, ವೆಂಟಿಲೇಟರ್​ ಆಕ್ಸಿಜನ್​ ಬೆಡ್​ಗಳನ್ನು ಬ್ಲಾಕ್​ ಮಾಡಿಕೊಳ್ಳುತ್ತಿದ್ದರು ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು.

Comments are closed.