ಕರಾವಳಿ

ವಾರಾಂತ್ಯ ಕರ್ಫ್ಯೂಗೆ ಉತ್ತಮ ಸ್ಪಂದನೆ: ದ.ಕ.ಜಿಲ್ಲೆಯಲ್ಲಿ ರವಿವಾರವೂ ಜನಜೀವನ ಸಂಪೂರ್ಣ ಸ್ತಬ್ಧ

Pinterest LinkedIn Tumblr

ಮಂಗಳೂರು: ಕೊರೋನ ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂಗೆ ರವಿವಾರವೂ ದ.ಕ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಜನಜೀವನ ಸಂಪೂರ್ಣ ಸ್ತಬ್ಧಗೊಂಡಿತ್ತು.

ಶನಿವಾರ ಹಾಗೂ ರವಿವಾರದಂದು ಕರಾವಳಿ ಸಂಪೂರ್ಣ ಸ್ತಬ್ಧಗೊಂಡಿತ್ತು. ಬೆಳಿಗ್ಗಿನ ಸಮಯದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 10ಗಂಟೆಗೆ ಎಲ್ಲ ಅಂಗಡಿಗಳು ಬಂದ್ ಆಗಲಿರುವುದರಿಂದ ತರಕಾರಿ, ದಿನಸಿ, ಹಾಲಿನ ಅಂಗಡಿಗಳಲ್ಲಿ ಜನ ಮುಗಿ ಬಿದ್ದು ಅಗತ್ಯ ವಸ್ತುಗಳನ್ನು ಖರೀದಿಸಿದರು. 10ಗಂಟೆ ಬಳಿಕ ಮಂಗಳೂರು ಸೇರಿದಂತೆ ಜಿಲ್ಲೆಯ ಎಲ್ಲಾ ರಸ್ತೆಗಳು ವಾಹನ ಸಂಚಾರಗಳಿಲ್ಲದೇ ಬಿಕೋ ಎನ್ನುತ್ತಿತ್ತು.

ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿರುವ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಿಗ್ಗೆ ಆರು ಗಂಟೆಯ ತನಕ ಮುಂದುವರೆಯಲಿದೆ. ಸೋಮವಾರ ಬೆಳಿಗ್ಗೆ ಆರು ಗಂಟೆಯ ಬಳಿಕ ಮತ್ತೆ ಎಂದಿನಂತೆ ಜನಜೀವನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸೋಮವಾರದಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಆಟೋ, ಬಸ್, ವಾಹನ ಸಂಚಾರ ಕೂಡ ಇರಲಿದೆ. ಸಾರ್ವಜನಿಕರಿಗೆ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಅವಕಾಶವಿದೆ. ಆಸ್ಪತ್ರೆಗಳು, ಮೆಡಿಕಲ್ ಸೇವೆಗಳು ಲಭ್ಯವಿದೆ. ಅನಗತ್ಯ ಸೇವೆಗಳಿಗೆ, ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ರಾತ್ರಿ 9 ಗಂಟೆಯ ತನಕ ವಿನಾಯಿತಿ ಇರಲಿದ್ದು, 9 ಗಂಟೆಯ ಬಳಿಕ ರಾತ್ರಿ ಮತ್ತೆ ಕರ್ಫ್ಯೂ ಜಾರಿಗೆ ಬರಲಿದೆ.

ಕೋವಿಡ್ ನಿಯಮ ಉಲ್ಲಂಘನೆ; 185 ಕೇಸು ದಾಖಲು

ಇದೇ ವೇಳೆ ನಗರದಲ್ಲಿ ಕೋವಿಡ್ ನಿಯಮ ಉಲ್ಲಂಘನೆಯ 185 ಕೇಸುಗಳು ದಾಖಲಾಗಿದ್ದು, ಒಟ್ಟು 22,700 ರೂ. ದಂಡ ವಸೂಲಿ ಮಾಡಲಾಗಿದೆ. ಒಂದು ವಾಹನವನ್ನು ಜಫ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ 94 ಮಾಸ್ಕ್ ಉಲ್ಲಂಘನೆ ಕೇಸಿನಲ್ಲಿ 13,300 ರೂ. ದಂಡ ವಸೂಲಿ ಮಾಡಲಾಗಿದೆ. ರವಿವಾರ ಕೊರೋನ ಸೋಂಕು ತಡೆ ಕಾಯ್ದೆಯಡಿ ಒಂದು ಕೇಸು ದಾಖಲಾಗಿದೆ. 91 ಮಾಸ್ಕ್ ಉಲ್ಲಂಘನೆ ಕೇಸುಗಳಲ್ಲಿ 9,400 ರೂ. ದಂಡ ವಿಧಿಸಲಾಗಿದ್ದು, ಬಜಪೆ ವ್ಯಾಪ್ತಿಯಲ್ಲಿ ಒಂದು ವಾಹನ ಮುಟ್ಟುಗೋಲು ಹಾಕಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

Comments are closed.