
ಮಂಗಳೂರು, ಎಪ್ರಿಲ್. 24: ಕೊರೋನ ವೈರಸ್ ಅನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ವಾರಾಂತ್ಯ ಕರ್ಫ್ಯೂ ದಿನವಾದ ಶನಿವಾರ ಬೆಳಗ್ಗೆ 11 ಗಂಟೆಯಾಗುತ್ತಿದ್ದಂತೆ ದ.ಕ.ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದೆ.
ಸದಾ ಜನಜಂಗುಳಿಯಿಂದ ತುಳುಕುತ್ತಿರುವ ಮಂಗಳೂರಿನ ಪ್ರಮುಖ ವ್ಯಾಪಾರ, ವ್ಯಾವಹಾರಿಕ ಕೇಂದ್ರ, ಮಿನಿವಿಧಾನ ಸೌಧ, ನ್ಯಾಯಾಲಯ, ಪೊಲೀಸ್ ಠಾಣೆ, ಶಾಸಕರ ಕಚೇರಿ ಸಹಿತ ಸರಕಾರಿ ಹಾಗೂ ವಿವಿಧ ಖಾಸಗಿ ಕಚೇರಿಗಳು 11 ಗಂಟೆಯ ಬಳಿಕ ಬಿಕೋ ಎನ್ನುತ್ತಿತ್ತು.

ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಇದು ಶುಕ್ರವಾರ ರಾತ್ರಿಯಿಂದಲೇ ಆರಂಭವಾಗಿದೆ. ಈ ಹಿನ್ನೆಲೆ ಶನಿವಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.
6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ ಹೆಚ್ಚು ಜನರು ಮನೆಯಿಂದ ಹೊರ ಬಾರದೇ ಮನೆಯಲ್ಲೇ ಉಳಿದರು. ನಗರದ ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ಸೂಪರ್ ಮಾರುಕಟ್ಟೆಗಳು ತೆರದಿದ್ದು, ಬೆರಳೆಣಿಕೆಯ ಜನ ಇದ್ದರು. ಇನ್ನು ನಗರದ ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿತ್ತು.

ವೀಕೆಂಡ್ ಕರ್ಫ್ಯೂ ಸಂದರ್ಭ ಅನಗತ್ಯವಾದ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಹಣ್ಣು, ತರಕಾರಿ ಖರೀದಿ, ಪತ್ರಿಕೆ ಮಾರಾಟ ಹಾಗೂ ಪತ್ರಿಕೆ ಮಾರಾಟ ಹಾಗೂ ಹೊಟೇಲ್ ಪಾರ್ಸೆಲ್ ಸೇವೆಗೆ ಅವಕಾಶವಿದೆ. 10 ಗಂಟೆಯ ಬಳಿಕ ಜಿಲ್ಲೆಯಾದ್ಯಂತ ಅಗತ್ಯ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲಾ ಬಂದ್ ಆಗಿವೆ.
ಅಗತ್ಯ ವಸ್ತುಗಳ ಖರೀದಿ ಸಮಯ ಮುಗಿಯುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಅನಗತ್ಯವಾಗಿ ಹೊರಗೆ ಬರದಂತೆ ತಡೆಯಲು ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಿತ್ತು.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಆಯಾ ಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ತಡೆ ಹಿಡಿಯಲಾಗಿದ್ದು, ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಪೊಲೀಸರು ವಾಹನ ಸಂಚಾರ ತಪಾಸಣೆ ನಡೆಸಿದರು.

ಯಾವೂದೇ ಅಹಿತಕರ ನಡೆಯದಂತೆ ಮುನ್ನೇಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದಲ್ಲಿ, 54 ಚೆಕ್ ಪೋಸ್ಟ್ ಗಳು ನಿರ್ಮಿಸಲಾಗಿದ್ದು ಪ್ರತಿ ಚೆಕ್ ಪೋಸ್ಟ್ ನಲ್ಲೂ 6 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 35 ಮೊಬೈಲ್ ಸ್ಕಾಡ್ ಗಳು, ಸಾವಿರಕ್ಕೂ ಅಧಿಕ ಸಿಬ್ಬಂದಿ , ಕೊವೀಡ್ ಮಾರ್ಷಲ್ ನೇಮಕ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ವ್ಯಾಪರ ಸ್ತಗಿತ :
ಇದೇ ವೇಳೆ ಸದಾ ಜನಜಂಗುಳಿಯಿಂದ ತುಳುಕುತ್ತಿರುವ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ, ಪ್ರಮುಖ ವ್ಯಾಪಾರ, ವ್ಯಾವಹಾರಿಕ ಕೇಂದ್ರ, ಮಿನಿವಿಧಾನ ಸೌಧ, ನ್ಯಾಯಾಲಯ, ಪೊಲೀಸ್ ಠಾಣೆ, ಶಾಸಕರ ಕಚೇರಿ ಸಹಿತ ಸರಕಾರಿ ಹಾಗೂ ವಿವಿಧ ಖಾಸಗಿ ಕಚೇರಿಗಳನ್ನು ಹೊಂದಿರುವ ಬಿ.ಸಿ.ರೋಡ್ 11 ಗಂಟೆಯ ಬಳಿಕ ಬಿಕೋ ಎನ್ನುತ್ತಿತ್ತು.

ಹಾಗೆಯೇ ವಾರಾಂತ್ಯ ಕರ್ಫ್ಯೂಗೆ ಬಂಟ್ವಾಳ ತಾಲೂಕಿನಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರಗಳಾದ ಮಾಣಿ, ಕಲ್ಲಡ್ಕ, ವಿಟ್ಲ, ಮೆಲ್ಕಾರ್, ಪಾಣೆಮಂಗಳೂರು, ತುಂಬೆ, ಫರಂಗಿಪೇಟೆ, ಸಿದ್ದಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಬೆಳಗ್ಗೆ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು 11 ಗಂಟೆ ಆಗುತ್ತಿ ದ್ದಂತೆ ಬಂದ್ ಮಾಡಿ ವ್ಯಾಪಾರಿಗಳು ಮನೆ ಸೇರಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ 11 ಗಂಟೆಯ ವರೆಗೆ ಮಡಿಕಲ್, ದಿನಸಿ, ತರಕಾರಿ, ಹಣ್ಣು, ಮೀನು, ಮಾಂಸ, ಹಾಲು ಮೊದಲಾದ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ವಸ್ತುಗಳನ್ನು ಖರೀದಿಸಲೂ ಜನರಿಗೆ ಅವಕಾಶ ನೀಡಲಾ ಗಿತ್ತು. ಆದರೆ ಬಿ.ಸಿ.ರೋಡ್ ಪರಿಸರದಲ್ಲಿ ಕೆಲವು ಅಗತ್ಯ ವಸ್ತುಗಳ ಅಂಗಡಿಗಳು ಬೆಳಗ್ಗೆಯಿಂದಲೇ ಬಾಗಿಲು ಮುಚ್ಚಿತ್ತು.
ತಾಲೂಕಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಬೆಳಗ್ಗೆಯಿಂದ ವಾಹನಗಳ ಓಡಾಟ ತೀರ ವಿರಳ ವಾಗಿತ್ತು. 11 ಗಂಟೆಯಾಗುತ್ತಿದ್ದಂತೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತಾಲೂಕಿನ ಪ್ರಮುಖ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಪುತ್ತೂರು : ವೀಕೆಂಡ್ ಕರ್ಫ್ಯೂ ಯಶಸ್ವಿ
ವೀಕೆಂಡ್ ಕರ್ಫ್ಯೂ ಶನಿವಾರ ಪುತ್ತೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲೂ ಯಶಸ್ವಿಯಾಗಿದೆ. ಪ್ರತಿದಿನ ಬೆಳಗ್ಗಿನಿಂದ ರಾತ್ರಿಯ ತನಕ ಜನರ ಓಡಾಟ, ವಾಹನಗಳ ಓಡಾಟಗಳಿಂದ ತುಂಬಿರುತ್ತಿದ್ದ ಪುತ್ತೂರು ನಗರವು ಶನಿವಾರ ಮದ್ಯಾಹ್ನ ಜನ, ವಾಹನ ಸಂಚಾರವಿಲ್ಲದೆ ಬಿಕೋ ಅನ್ನುತ್ತಿತ್ತು.
ಬೆಳಗ್ಗೆ 6 ಗಂಟೆಯಿಂದ 10 ಗಂಟೆಗಳ ತನಕ ಅಗತ್ಯ ವಸ್ತುಗಳ ಖರೀದಿಗಳಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಅಗತ್ಯ ವಸ್ತುಗಳಾದ ದಿನಸಿ, ಹಣ್ಣು, ತರಕಾರಿ, ಹಾಲು, ಬೇಕರಿ, ಮೆಡಿಕಲ್ ಶಾಪ್, ಪೇಪರ್ ಸ್ಟಾಲ್ ಗಳು ಬೆಳಗ್ಗಿನ ವೇಳೆಗೆ ತೆರೆದಿತ್ತು. 10 ಗಂಟೆಯ ಬಳಿಕ ಎಲ್ಲವೂ ಬಂದ್ ಅಗಿತ್ತು.
ಕೆಎಸ್ಸಾರ್ಟಿಸಿ ಬಸ್ಸುಗಳ ನಿಲ್ದಾಣದಲ್ಲಿದ್ದರೂ ಪ್ರಯಾಣಿಕರು ಇಲ್ಲದ ಕಾರಣ ಓಡಾಟ ಸ್ಥಗಿತಗೊಳಿಸಲಾಗಿತ್ತು. ವಿನಾಃಕಾರಣ ರಸ್ತೆಗಿಳಿಯುವ ಜನರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದು, ಬೆರಳೆಣಿಕೆಯಷ್ಟು ವಾಹನ ಸಂಚಾರ ಬಿಟ್ಟರೆ ಎಲ್ಲವೂ ಬಂದ್ ಆಗಿವೆ.
Comments are closed.