ಕರಾವಳಿ

ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ : ಪವಿತ್ರ ಬಲಿಪೂಜೆಯ ಪ್ರಾರ್ಥನಾ ವಿಧಿಯೊಂದಿಗೆ ಸಮಾರೋಪ

Pinterest LinkedIn Tumblr

ಮಂಗಳೂರು : ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಮಂಗಳೂರಿನ ಅತಿ ವಂದನೀಯ ಬಿಷಪ್ ಪೀಟರ್ ಪೌಲ್ ಸಲ್ಡಾನರವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆಯ ಪ್ರಾರ್ಥನಾ ವಿಧಿಯೊಂದಿಗೆ ವಿಧ್ಯುಕ್ತವಾಗಿ ನಡೆಯಿತು.

ತದನಂತರ ಗೌರವೋಚಿತವಾಗಿ ಅತಿಥಿ ಮಹೋದಯರನ್ನು ಸಭೆಗೆ ಬರಮಾಡಿಕೊಂಡು, ಸಮೂಹ ಪ್ರಾರ್ಥನಾ ಗೀತೆ ಹಾಗೂ ಸ್ವಾಗತ ನೃತ್ಯದೊಂದಿಗೆ ಸ್ವಾಗತ ಕೋರಲಾಯಿತು. ಕಾಲೇಜು ನಡೆದು ಬಂದ ಹಾದಿಯ ಕುರಿತಾಗಿ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಜರ್ಮನಿಯ ರುಹ್ರ್ ವಿಶ್ವವಿದ್ಯಾನಿಲಯದ ವಿಜ್ಞಾನಿಯಾಗಿರುವ ಪ್ರೋ.ಅಂಜನಾ ದೇವಿ ಸಭೆಯನ್ನುದ್ದೇಶಿಸಿ ಶಿಕ್ಷಣವೇ ಪ್ರಪಂಚವನ್ನು ಬದಲಾಯಿಸುವ ಆಯುಧ. ಸತತ ಪರಿಶ್ರಮ ಮತ್ತು ಶ್ರದ್ಧೆಯೇ ಸಾಧನೆಗೆ ದಾರಿ. ಯುವ ವಿಜ್ಞಾನಿಗಳಿಗೆ ಅಗತ್ಯ ಸೌಲಭ್ಯವನ್ನು ಒದಗಿಸಬೇಕೆಂದು, ಹಾಗೆಯೇ ಇಂತಹ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಕಲಿಯುವವರೇ ಭಾಗ್ಯವಂತರೆಂದು ಭಾವನಾತ್ಮಕವಾಗಿ ಮಾತನಾಡಿದರು.

ಅಪೋಸ್ತೊಲಿಕ್ ಕಾರ್ಮೆಲ್ ಸಂಸ್ಥೆಯ ಪ್ರಾಂತೀಯ ಅಧಿಕಾರಿಣಿ ರೆವೆ. ಸಿಸ್ಟರ್ ಶಮಿತಾ ಎ.ಸಿ ಯವರು ಪೋಪರ ಸಂದೇಶ ಹಾಗೂ ಆಶೀರ್ವಚವನ್ನು ವಾಚಿಸಿದರು. ವಿಶ್ರಾಂತ ಪ್ರಾಚಾರ್ಯರುಗಳ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಲಾಯಿತು,

ಸನ್ಮಾನಿತರ ಪರವಾಗಿ ಡಾ| ಸಿಸ್ಟರ್ ಜೆಸ್ವೀನಾರವರು ತಮ್ಮ ನುಡಿ ನಮನ ಸಲ್ಲಿಸಿದರು. ಶತಮಾನದ ನೆನಪಿನ ಕುರುಹಾಗಿ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸುವ ಕಾರ್ಯವನ್ನು ಸನ್ಮಾನ್ಯ ಸಚಿವರಾದ ಶ್ರೀ ವೇದವ್ಯಾಸ ಕಾಮತ್ ಹಾಗೂ ಕಾರ್ಪೊರೇಟರ್ ಶ್ರೀ ನವೀನ್ ಆರ್ ಡಿಸೋಜಾರವರು ನೆರವೇರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವರು ಕಾಲೇಜಿನ ಹಿರಿಮೆ ಗರಿಮೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಅಪೋಸ್ತೊಲಿಕ್ ಕಾರ್ಮೆಲ್ ಸಂಸ್ಥೆಯ ಸುಪೀರಿಯರ್ ಜನರಲ್ ರೆವೆ. ಸಿಸ್ಟರ್ ಮರಿಯ ನಿರ್ಮಲಿನಿಯವರು ಕಾಲೇಜು ಇತಿಹಾಸ ಸಂಚಿಕೆಯನ್ನು ಬಿಡುಗಡೆಗೊಳಿಸಿ “ಆತ್ಮಸ್ಥೈರ್ಯವನ್ನು ಮೈಗೂಡಿಸಿಕೊಂಡು, ಮುಂದಿನ ಭವಿಷ್ಯದ ಕಡೆ ದೃಷ್ಟಿ ಹರಿಸಬೇಕೆಂದು” ಹೇಳಿದರು.

ಕೃತಿ ರಚನಾಕಾರರಾದ ಸಿಸ್ಟರ್ ಸಿಲ್ವೆಟ್ ಹಾಗೂ ಸಿಸ್ಟರ್ ಡಾ| ಜೆಸ್ವೀನಾರನ್ನು ಈ ಸಂದರ್ಭದಲ್ಲಿ ಸನ್ಮಾನಿಸುವುದರೊಂದಿಗೆ ಹಳೆವಿದ್ಯಾರ್ಥಿನಿ ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳ ಅವಿರತ ಶ್ರಮವನ್ನು ಸ್ಮರಿಸಿ ಗೌರವಿಸಲಾಯಿತು. ಸಂಸ್ಥಾಪಕಿ ಮದರ್ ಮೇರಿ ಅಲೋಷಿಯಾರ ಬಗ್ಗೆ ನೃತ್ಯ ರೂಪಕವನ್ನು ರಚಿಸಲಾಗಿದ್ದು, ಶತಮಾನೋತ್ಸವ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪರಿಸಮಾಪ್ತಿಗೊಳಿಸಲಾಯಿತು.

ಕಾಲೇಜು ವಿಭಾಗದ ಪ್ರಾಚಾರ್ಯೆ ಸಿಸ್ಟರ್ ಡಾ| ವೆನಿಸ್ಸಾ ಎ.ಸಿ ಸ್ವಾಗತಿಸಿ, ಪದವಿ ಪೂರ್ವ ವಿಭಾಗದ ಪ್ರಾಚಾರ್ಯೆಸಿಸ್ಟರ್ ನೋರಿನ್ ಡಿಸೋಜಾ ವಂದನಾರ್ಪಣೆಗೈದು, ಉಪನ್ಯಾಸಕರಾದ ಶ್ರೀಮತಿ ಮಾಳವಿಕ ಹಾಗೂ ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಕು. ಹೆನ್ರಿಕಾ ಹಾಗೂ ಕು. ಪ್ರೀತಿ ವಿದ್ಯಾರ್ಥಿ ಕಾರ್ಯಕ್ರಮವನ್ನು ನಿರೂಪಿಸಿದರು.

ಮಾಜಿ ಶಾಸಕರಾದ ಶ್ರೀ ಜೆ.ಆರ್.ಲೋಬೊ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಾ| ಲಿಡಿಯಾ ಫೆರ್ನಾಂಡಿಸ್, ಕಾರ್ಯಕ್ರಮ ಸಂಯೋಜಕಿ ಹಾಗು ಸಭಾ ಕಾರ್ಯಕ್ರಮ ನಿರ್ವಹಿಸಿದ ಡಾ| ದೇವಿಪ್ರಭ ಆಳ್ವ ಹಾಗೂ ಶ್ರೀಮತಿ ಮೀರಾ ಅರಾನ್ಹಾ, ಉಪಸ್ಥಿತರಿದ್ದರು.

ಕೋವಿಡ್ ನಿಯಮಕ್ಕನುಸಾರವಾಗಿ ಹೆಚ್ಚು ಜನಸಂದಣಿಗೆ ಅನುವು ನೀಡದೆ ಕಾರ್ಯಕ್ರಮದ ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣದಲ್ಲಿ ಮುಖಾಂತರ ಬಿತ್ತರಿಸಲಾಯಿತು.

Comments are closed.