
ಢಾಕಾ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಲ್ಲಿನ ಸಾವರ್ ಉಪಜಿಲಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕ್ಕೆ ಭೇಟಿ ನೀಡಿ, 1971ರ ವಿಮೋಚನಾ ಯುದ್ಧದಲ್ಲಿ ಮಡಿದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಮಾಲಾರ್ಪಣೆ ಮಾಡಿದರು.
ಎರಡು ದಿನಗಳ ಭೇಟಿಗಾಗಿ ಬೆಳಗ್ಗೆ ಢಾಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರಿಂದ ಭವ್ಯ ಸ್ವಾಗತ ದೊರೆಯಿತು. 1971 ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಸ್ಮರಣಾರ್ಥ ಬಾಂಗ್ಲಾದೇಶದ ಮಿಲಿಟರಿ ಸಿಬ್ಬಂದಿಯೊಂದಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಸಿ ನೆಟ್ಟ ಪ್ರಧಾನಿ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು. ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬಾಂಗ್ಲಾದ ದೇಶಭಕ್ತ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ್ದೇನೆ. ಹುತಾತ್ಮರ ಶೌರ್ಯವು ಭವಿಷ್ಯದ ಪೀಳಿಗೆಗೆ ಅನ್ಯಾಯದ ವಿರುದ್ಧ ಹೋರಾಡಲು ಮತ್ತು ಸದಾಚಾರ ರಕ್ಷಿಸಲು ಸ್ಪೂರ್ತಿಯಾಗಲಿದೆ. ವಂಚನೆ ಮತ್ತು ದಬ್ಬಾಳಿಕೆಯ ಮೇಲೆ ಸತ್ಯ ಮತ್ತು ಧೈರ್ಯದ ಉದಾತ್ತ ವಿಜಯದ ಶಾಶ್ವತ ಜ್ಞಾಪನೆಯಾಗಿ ಸಾವರ್ ನಲ್ಲಿ ಶಾಶ್ವತ ಜ್ವಾಲೆಯು ಉಳಿಯಬೇಕೆಂದು ಭಾರತದ ಜನರ ಪರವಾಗಿ ಪ್ರಾರ್ಥಿಸುವುದಾಗಿ ಮೋದಿ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.
ಬಾಂಗ್ಲಾದೇಶ ತನ್ನ 50 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಕೋವಿಡ್-19 ಕಾಣಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ವಿದೇಶಿ ಭೇಟಿ ಇದಾಗಿದೆ.
Comments are closed.