ಕರಾವಳಿ

ಮೆರಿಟೈಮ್ ಇಂಡಿಯಾ ಸಮಿಟ್- 2021, ವರ್ಚುವಲ್ ಸಭೆ: ನಾಳೆ ಪ್ರಧಾನಿ ಮೋದಿಯವರಿಂದ ಉದ್ಘಾಟನೆ

Pinterest LinkedIn Tumblr

 ಮಂಗಳೂರು/ ಬೆಂಗಳೂರು, ಮಾರ್ಚ್ 01 :ಮಾರ್ಚ್ 02ರಂದು ಮೆರಿಟೈಮ್ ಇಂಡಿಯಾ ಸಮಿಟ್-2021 (MARITIME INDIA SUMMIT 2021) ನಡೆಯುವ ವರ್ಚುವಲ್ ಸಭೆಯನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೊದಿಯವರು ಉದ್ಘಾಟನೆ ಮಾಡಲಿದ್ದಾರೆ.

ಸದರಿ ಸಭೆಯಲ್ಲಿ ಭಾರತೀಯ ನೌಕಾ ಕ್ಷೇತ್ರದಲ್ಲಿ ಲಭ್ಯವಿರುವ ಔದ್ಯೋಗಿಕ ಅವಕಾಶಗಳು ಹಾಗೂ ಆತ್ಮ ನಿರ್ಭರ ಭಾರತದ ನಿರ್ಮಾಣದ ಬಗ್ಗೆ ಅನ್ವೇಷಿಸಲಾಗುವುದು. ಸುಮಾರು ಒಂದು ಲಕ್ಷ ಪ್ರತಿನಿಧಿಗಳು ಸದರಿ ಸಭೆಯಲ್ಲಿ ದೇಶಿಯ ಮತ್ತು ಅಂತರಾಷ್ಟ್ರೀಯ ಬಂಡವಾಳ ಹೂಡಿಕೆದಾರರು, ನೌಕಾ ಕ್ಷೇತ್ರದ ಮಾಲಕರು, ತಂತ್ರಜ್ಞಾನದ ಪರಿಣಿತರು, ನೀತಿಯ ಯೋಜಕರು, ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರದ ಪ್ರತಿನಿಧಿಗಳು ಹಾಗೂ 40 ಕ್ಕಿಂತ ಹೆಚ್ಚು ಸಹಭಾಗಿತ್ವ ದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್ 2ರಂದು ಮಧ್ಯಾಹ್ನ 12:30 ಕ್ಕೆ ಆಯೋಜಿಸಲಾದ ವಿಶೇಷ ಅಧಿವೇಶನದಲ್ಲಿ ರಾಷ್ಟ್ರದ ಅತೀ ಪ್ರಮುಖ ನೌಕಾ ರಾಜ್ಯವಾದ ಕರ್ನಾಟಕ ರಾಜ್ಯದಲ್ಲಿ ನೌಕಾ ಕ್ಷೇತ್ರದಲ್ಲಿ ಲಭ್ಯವಿರುವ ಹಲವಾರು ಬಂಡವಾಳ ಹೂಡಿಕೆ ಬಗ್ಗೆ ಮಾಹಿತಿಯನ್ನು ಪ್ರಸ್ತುತಪಡಿಸಲಾಗುತ್ತದೆ.

ಮಾನ್ಯ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ರವರು ನೌಕಾಕ್ಷೇತ್ರದಲ್ಲಿನ ಬಂಡವಾಳ ಹೂಡಿಕೆದಾರರಿಗೆ ವಿಡಿಯೋ ಸಂದೇಶದ ಮೂಲಕ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಮಂತ್ರಿಸಲಿದ್ದಾರೆ.

ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕಾ ಇಲಾಖಾ ಸಚಿವರಾದ ಎಸ್. ಅಂಗಾರ ರವರು ಕರ್ನಾಟಕ ರಾಜ್ಯದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ, ಸಾಧನೆ ಮತ್ತು ಮಹತ್ವಕಾಂಕ್ಷೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಭಾ.ಆ.ಸೇ, ಅಪರ ಮುಖ್ಯ ಕಾರ್ಯದರ್ಶಿಗಳಾದ ಕಪೀಲ್ ಮೋಹನ್ ರವರು ಕರ್ನಾಟಕ ಸರ್ಕಾರ ಮೂಲ ಸೌಲಭ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಕರ್ನಾಟಕ ಜಲಸಾರಿಗೆ ಮಂಡಳಿ ಇವರು ಕರ್ನಾಟಕ ರಾಜ್ಯದ ನೌಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ದೇಶಿಯ ಮತ್ತು ಅಂತರಾಷ್ಟ್ರೀಯ ಬಂಡವಾಳ ಹೂಡಿಕೆದಾರರಿಗೆ ಸ್ವಾಗತಿಸುವುದರೊಂದಿಗೆ ರಾಜ್ಯದಲ್ಲಿ ನೌಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಿರುವರು.

ಸದರಿ ಸಭೆಯಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ವಾಣಿಜ್ಯ ಮತ್ತು ಔದ್ಯೋಗಿಕ ಇಲಾಖೆಗಳ ಉನ್ನತಾಧಿಕಾರಿಗಳು ಉಪಸ್ಥಿತರಿರುವರು.

ಕರ್ನಾಟಕ ಜಲಸಾರಿಗೆ ಮಂಡಳಿಯು ರಾಜ್ಯದ ನೌಕಾ ಕ್ಷೇತ್ರದಲ್ಲಿ ಲಭ್ಯವಿರುವ ವಿಪುಲ ಬಂಡವಾಳ ಹೂಡಿಕೆಯ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯವರು, ವಾಣಿಜ್ಯ ಮತ್ತು ಔದ್ಯೋಗಿಕ ಇಲಾಖೆಯವರು ರಾಜ್ಯದಲ್ಲಿ ಆಯಾ ಇಲಾಖಾ ವ್ಯಾಪ್ತಿಯಲ್ಲಿ ಬಂಡವಾಳ ಹೂಡಿಕೆಗೆ ಲಭ್ಯವಿರುವ ಹಲವು ಅವಕಾಶಗಳ ಕುರಿತು ಮಾಹಿತಿಯನ್ನು ನೀಡಲಿದ್ದಾರೆ.

ಕರ್ನಾಟಕ ರಾಜ್ಯವು ಬಂದರು ಆಧಾರಿತ ಸುಸ್ಥಿರ ಅಭಿವೃದ್ಧಿಯ ಕುರಿತು ನಡೆಯುವ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಲಿರುವರು.

ರಾಜ್ಯದಲ್ಲಿ ನವೀನ ಮಾದರಿಯ ಆಧುನಿಕ ಬಂದರುಗಳ ನಿರ್ಮಾಣ, ಕರಾವಳಿ ಆಧಾರಿತ ಪ್ರವಾಸೋದ್ಯಮ, ರಾಜ್ಯದಲ್ಲಿ ಬಂದರು ಅಭಿವೃದ್ಧಿಯಲ್ಲಿ ಪಾಲೂದಾರರಾದ ಖಾಸಗಿ ಬಂಡವಾಳ ಹೂಡಿಕೆ ಕಂಪೆನಿಗಳ ಅನುಭವ ಇತ್ಯಾದಿಗಳ ಬಗ್ಗೆ ಸದರಿ ಸಭೆಯಲ್ಲಿ ವಿಚಾರ ವಿನಿಮಯ ಮಾಡಲಿದ್ದಾರೆ.

ರಾಜ್ಯ ಸರಕಾರದ ವಿಶಿಷ್ಟಪೂರ್ಣವಾದ ಮಹತ್ವಾಕಾಂಕ್ಷೆಯ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಹೆಚ್ಚಿನ ವಿವರ ಮತ್ತು ನೋಂದಣಿಗಾಗಿ www.maritimeindiasummit.in. ಲಾಗಿನ್ ಆಗಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.