ಶಿವಮೊಗ್ಗ: ಶಿವಮೊಗ್ಗದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಮಹಾ ದುರಂತವೊಂದು ಸಂಭವಿಸಿದೆ. ಗಣಿಗಾರಿಕೆ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಪೆಟ್ಟಿಗೆಯಷ್ಟುಜಿಲೆಟಿನ್ ಏಕಕಾಲದಲ್ಲಿ ಸ್ಫೋಟಿಸಿ 8 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಶಂಕೆ ಇದೆ.

ನಿನ್ನೆ ರಾತ್ರಿ ಸುಮಾರು 10.21ರಿಂದ 10.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು,ಸ್ಫೋಟದ ತೀವ್ರತೆಗೆ ಶಿವಮೊಗ್ಗ ಸೇರಿ ಸಮೀಪದ ಜಿಲ್ಲೆಯಲ್ಲೂ ಭೂಮಿ ಕಂಪಿಸಿದ ಅನುಭವವೂ ಆಗಿದ್ದು, ಹಲವು ಮನೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ಭಯಭೀತರಾದ ಜನ ಮನೆಯಿಂದ ದಿಕ್ಕಾಪಾಲಾಗಿ ಹೊರಗೆ ಓಡಿದ ಘಟನೆ ನಡೆದಿದೆ.
ಮೃತ ಕಾರ್ಮಿಕರ ಮೃತದೇಹ ಛಿದ್ರಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಶಿವಮೊಗ್ಗ ನಗರದಿಂದ ಸುಮಾರು 14 ಕಿ.ಮೀ. ದೂರದಲ್ಲಿರುವ ಹುಣಸೋಡು ಬಳಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಗಣಿಗಾರಿಕೆಗೆಂದು ಲಾರಿಯೊಂದರಲ್ಲಿ ಹತ್ತಾರು ಪೆಟ್ಟಿಗೆಯಷ್ಟು ಜಿಲೆಟಿನ್ ಸಂಗ್ರಹಿಸಿಡಲಾಗಿತ್ತು. ದಿಢೀರ್ ಈ ಜಿಲೆಟಿನ್ ಸ್ಫೋಟಿಸಿ ದುರಂತ ಸಂಭವಿಸಿದೆ. ಈ ಗಣಿಗಾರಿಕೆಯಲ್ಲಿ ಬಹುತೇಕ ಬಿಹಾರಿ ಕಾರ್ಮಿಕರೇ ಕೆಲಸ ಮಾಡುತ್ತಿದ್ದು, ಅವರಲ್ಲಿ ಒಂದಷ್ಟು ಮಂದಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ಚೂರು ಚೂರಾಗಿದ್ದು, ಮೃತಕಾರ್ಮಿಕರ ಮೃತದೇಹಗಳು ಗುರುತಿಸಲಾಗದಷ್ಟು ಛಿದ್ರವಾಗಿವೆ. ತಡ ರಾತ್ರಿ ಘಟನೆ ನಡೆದಿದ್ದರಿಂದ ಕಾರ್ಯಾಚರಣೆ ಈವರೆಗೂ ಮುಂದುವರೆದಿದೆ.
ಜಿಲೆಟಿನ್ ಸ್ಫೋಟದ ಕುರಿತು ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಲವು ಅಧಿಕಾರಿಗಳು ಸ್ಥಳಕ್ಕೆ ತೆರಳಿಸಿದ್ದಾರೆ.
Comments are closed.