
ಮಂಗಳೂರು, ಜನವರಿ 17 : ಕೊರೋನಾ ವಿಶ್ವವ್ಯಾಪಿಯಾಗಿ ಹರಡಿದ ಸಂದರ್ಭದಲ್ಲಿ ಭಾರತವು ಕೂಡ ಅನೇಕ ಸಮಸ್ಯೆಯನ್ನು ಎದುರಿಸಿತು. ಈ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಲಸಿಕೆಯನ್ನು ನೀಡುವಲ್ಲಿ ನಮ್ಮ ದೇಶ ಯಶಸ್ವಿಯಾಗಿದೆ ಎಂದು ಜಿಲಾ ್ಲಉಸ್ತುವಾರಿ ಸಚಿವ, ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ವತಿಯಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಕೋವಿಡ್-19 ಲಸಿಕಾಕರಣದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಬಹಳ ಪರಿಣಾಮ ಬೀರಿದ್ದರೂ ಕೂಡಾ, ಸರಿಯಾದ ಕೋವಿಡ್ ನಿಯಮ ಪಾಲನೆಯಿಂದಾಗಿ ಕೊರೋನಾ ಪಸರಿಸುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ, ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಜನಸಾಮಾನ್ಯರು ತಮ್ಮಕರ್ತವ್ಯ ನಿರ್ವಹಿಸಿದ್ದಾರೆ. ಕೊರೋನಾವನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿದ ರಾಷ್ಟ್ರಗಳಲ್ಲಿ ಭಾರತವು ಒಂದು. ಭಾರತ ಕೊರೋನಾ ಲಸಿಕೆ ಕಂಡುಹಿಡಿದ ಹಿನ್ನೆಲೆಯಲ್ಲಿ ದೇಶ-ವಿದೇಶದಿಂದ ಬೇಡಿಕೆ ಹೆಚ್ಚಾಗಿದೆ ಎಂದು ಸಚಿವ ಕೋಟ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಮರೆಯುತ್ತಿದ್ದು, ಸರಕಾರದ ನಿಯಮ ಉಲ್ಲಂಘನೆ ಯಾಗುತ್ತಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವರು ತಿಳಿಸಿದರು.
ಸಚಿವ ಎಸ್.ಅಂಗಾರ ಮಾತನಾಡಿ, ಸರಕಾರದ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದರೆ ಕೋರೋನಾವನ್ನು ಪ್ರತಿಯೊಬ್ಬರು ಯಶಸ್ವಿಯಾಗಿ ಎದುರಿಸಬಹುದು.
ಜಿಲ್ಲೆಯಲ್ಲಿ ಈಗಾಗಲೇ 89 ಸರ್ಕಾರಿ ವ್ಯವಸ್ಥೆಯಲ್ಲಿ 10,212 ಫಲಾನುಭವಿಗಳು ಹಾಗೂ 818 ಖಾಸಗಿ ವ್ಯವಸ್ಥೆಯಲ್ಲಿ 42,169 ಫಲಾನುಭವಿಗಳು ಮತ್ತು ಒಟ್ಟು 52,381 ಫಲಾನುಭವಿಗಳು ಕೋವಿನ್ ವೆಬ್ನಲ್ಲಿ ನೊಂದಾಯಿಸಿಕೊಂಡಿದ್ದಾರೆ, ಹಂತ ಹಂತವಾಗಿ ಲಸಿಕೆಯನ್ನು ನೀಡಲಾಗುತ್ತಿದ್ದು, ಲಸಿಕೆ ಪಡೆಯುವ ಫಲಾನುಭವಿಗಳು ಯಾವುದೇರೀತಿಯ ಗಾಬರಿಗೊಳಗಾಗದೆ ಇಂತಹ ಕಾಯಿಲೆಯಿಂದ ಮುಕ್ತರಾಗಿದ್ದೇವೆ ಎಂಬ ಅಪೇಕ್ಷೇಯಿಂದ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದರು.
ಜಿಲ್ಲಾಧಿಕಾರಿಡಾ.ರಾಜೇಂದ್ರ ಕೆ.ವಿ ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತೆಯರ ಜೊತೆಗೆ ನರ್ಸ್, ಆ್ಯಂಬುಲೆನ್ಸ್ನಲ್ಲಿ ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿ ಕೊಡಲಾಗಿದೆ. ಎರಡನೇ ಹಂತದಲ್ಲಿ ಪೊಲೀಸ್ ಸಿಬ್ಬಂದಿ, ಮುಂಚೂಣಿಯಲ್ಲಿರುವ ಕೊರೋನಾ ಹೋರಾಟಗಾರರಿಗೆ ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಆರ್.ಸಿ.ಎಚ್ ಅಧಿಕಾರಿ ಡಾ.ರಾಜೇಶ್ ಬಿ.ವಿ, ದಕ್ಷಿಣಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಉತ್ತರಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜಾ, ಜಿಲ್ಲಾ ಪಂಚಾಯತ್ನ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೆಲ್ವಮಣಿ, ಮೇಯರ್ ದಿವಾಕರ್ ಪಾಂಡೇಶ್ವರ, ಉಪಮೇಯರ್ ವೇದಾವತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ ಸ್ವಾಗತಿಸಿದರು. ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ.ಉಳೆಪ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.
Comments are closed.