
ನವದೆಹಲಿ: ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ ಈಗ ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದ್ದಾರೆ.
ಕೆವಾಡಿಯಾ-ವಾರಣಾಸಿ ಮಹಾಮಣ ಎಕ್ಸ್ಪ್ರೆಸ್ (ವಾರದಲ್ಲಿ ಒಂದು ದಿನ), ದಾದರ್-ಕೆವಾಡಿಯಾ ಎಕ್ಸ್ಪ್ರೆಸ್ (ದೈನಂದಿನ), ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ಸ್ಪ್ರೆಸ್ (ಪ್ರತಿದಿನ) ನಿಜಾಮುದ್ದೀನ್ – ಕೆವಾಡಿಯಾ ಎಕ್ಸ್ಪ್ರೆಸ್ (ವಾರಕ್ಕೆ 2 ಬಾರಿ) ಕೆವಾಡಿಯಾ – ರೇವಾ ಎಕ್ಸ್ಪ್ರೆಸ್ (ವಾರದಲ್ಲಿ ಒಂದು ದಿನ), ಚೆನ್ನೈ – ಕೆವಾಡಿಯಾ ಎಕ್ಸ್ಪ್ರೆಸ್ (ವಾರದಲ್ಲಿ ಒಂದು ದಿನ), ಪ್ರತಾಪನಗರ-ಕೆವಾಡಿಯಾ ಎಂಇಎಂಯು ರೈಲು (ದೈನಂದಿನ) ಮತ್ತು ಕೆವಾಡಿಯಾ-ಪ್ರತಾಪನಗರ ಎಂಇಎಂಯು ರೈಲು (ದೈನಂದಿನ) ಗಳಿಗೆ ಮೋದಿಯವರು ಚಾಲನೆ ನೀಡಿದ್ದಾರೆ.
ಏಕತಾ ಪ್ರತಿಮೆ ಸಂಪರ್ಕಿಸುವ 8 ರೈಲುಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಮೋದಿಯವರು, ಜನ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಇತ್ತೀಚಿನ “ವಿಸ್ಟಾ ಡೂಮ್ ಪ್ರವಾಸಿಗರ ಕೋಚ್” ಒದಗಿಸಲಾಗಿದ್ದು, ಇದು ಆಕಾಶದ ವಿಹಂಗಮ ನೋಟ ನೀಡುತ್ತದೆ. ಚೆನ್ನೈನ ಪುರುಚ್ಚಿ ತಲೈವರ್ ಡಾ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಒಂದು ರೈಲು ಕೇವಾಡಿಯಾ ತಲುಪಲಿದೆ. ಇಂದು ಎಂಜಿಆರ್ ಜನ್ಮವಾರ್ಷಿಕೋತ್ಸವ ದಿನವಾಗಿರುವುದು ವಿಶೇಷ ಎಂದು ಮೋದಿ ಹೇಳಿದ್ದಾರೆ.
ಏಕತಾ ಪ್ರತಿಮೆ ದೇಶದ ಪ್ರಮುಖ ಪ್ರವಾಸಿ ತಾಣವಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಜನರು ಏಕತಾ ಪ್ರತಿಮೆ ನೋಡಲು ಬರುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ದೇಶದ ವಿವಿಧ ಭಾಗಗಳಿಂದ 8 ಹೊಸ ರೈಲುಗಳ ಘೋಷಣೆ ಮಾಡಲಾಗಿದೆ. ಕೇವಲ ಏಕತಾ ಪ್ರತಿಮೆಗೆ ಭೇಟಿ ಮಾತ್ರವಲ್ಲದೇ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವುದರಿಂದ ಸ್ಥಳೀಯ ಉದ್ಯೋಗ ಸೃಷ್ಟಿಗೂ ಇದು ಅವಕಾಶ ಕಲ್ಪಿಸುತ್ತದೆ. ಅಲ್ಲದೇ ಕೇವಾಡಿಯಾದ ಆದಿವಾಸಿ ಜನರ ಬದುಕು ಬದಲಾಗಲು ಕಾರಣವಾಗಲಿದೆ ಎಂದು ಇದೇ ಭರವಸೆ ವ್ಯಕ್ತಪಡಿಸಿದ್ದಾರೆ.
ಏಕಪಾ ಪ್ರತಿಮೆ ನಿರ್ಮಾಣದಿಂದ ಈಗಾಗಲೇ ಕೇವಾಡಿಯಾದ ಚಹರೆ ಬದಲಾಗಿದೆ. ಇದೀಗ ಹೊಸ ರೈಲುಗಳ ಸಂಚಾರದಿಂದ ಈ ಕ್ಷೇತ್ರದ ಆರ್ಥಿಕ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಜಂಟಿಯಾಗಿ ಮುನ್ನಡೆಯಲಿವೆ ಎಂದು ತಿಳಿಸಿದ್ದಾರೆ.
ರೈಲ್ವೆ ಸಚಿವಾಲಯದ ಪ್ರಕಾರ, ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ಸ್ಪ್ರೆಸ್ಗೆ ಹೊಸ ಯುಗದ ‘ವಿಸ್ಟಾ-ಡೋಮ್ ಟೂರಿಸ್ಟ್ ಕೋಚ್’ ಒದಗಿಸಲಾಗಿದ್ದು, ಇದು ಸ್ಕೈಲೈನ್ನ ವಿಹಂಗಮ ನೋಟ ನೀಡಲಿದೆ.
Comments are closed.