ರಾಷ್ಟ್ರೀಯ

ಕೃಷಿ ಕಾಯಿದೆ ವಿರೋಧಿಸಿ ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದ ಆರ್‌ಎಲ್‌ಪಿ

Pinterest LinkedIn Tumblr


ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಒಂದೊಂದೇ ಪಕ್ಷಗಳು ಹೊರನಡೆಯುತ್ತಿದ್ದು, ಇದೀಗ ರಾಷ್ಟ್ರೀಯ ಲೋಕತಾಂತ್ರಿಕ್‌ ಪಕ್ಷ (ಆರ್‌ಎಲ್‌ಪಿ) ಕೂಡ ಇದೇ ಹಾದಿ ಹಿಡಿದಿದೆ.

ಹನುಮಾನ್‌ ಬೆನಿವಾಲ್‌ ನೇತೃತ್ವದ ಆರ್‌ಎಲ್‌ಪಿ ನೂತನ ಕೃಷಿ ಕಾಯಿದೆ ವಿರೋಧಿಸಿ ಎನ್‌ಡಿಎಯಿಂದ ಹೊರ ಬಂದಿದೆ. ರಾಜಸ್ಥಾನದ ನಾಗೌರ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೆನಿವಾಲ್‌, “ರೈತರ ವಿರೋಧಿಗಳಾಗಿರುವ ಯಾರ ಜೊತೆಗೂ ನಾವು ನಿಲ್ಲುವುದಿಲ್ಲ,” ಎಂದು ಘೋಷಿಸಿದ್ದಾರೆ.

2018ರಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆಗೂ ಮುನ್ನ ಹನುಮಾನ್‌‌ ಬೆನಿವಾಲ್‌ ಬಿಜೆಪಿಯಿಂದ ಹೊರ ಬಂದು ರಾಷ್ಟ್ರೀಯ ಲೋಕತಾಂತ್ರಿಕ್‌ ಪಕ್ಷ ಕಟ್ಟಿದ್ದರು. ನಂತರ 2019ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಆದರೆ ಕೃಷಿ ಕಾಯಿದೆಯನ್ನು ವಿರೋಧಿಸುತ್ತಾ ಬಂದಿದ್ದ ಅವರು ರೈತರ ಹೋರಾಟವನ್ನು ಬೆಂಬಲಿಸಿದ್ದರು. ಇದೀಗ ಮೈತ್ರಿಕೂಟವನ್ನೇ ತೊರೆದಿದ್ದಾರೆ.

ಆರ್‌ಎಲ್‌ಪಿ, ಇತ್ತೀಚೆಗೆ ಎನ್‌ಡಿಎ ಮೈತ್ರಿಕೂಟವನ್ನು ತೊರೆದ ಮೂರನೇ ಪಕ್ಷವಾಗಿದೆ. ಶಿವಸೇನೆ ಕಳೆದ ವರ್ಷ ಬಿಜೆಪಿ ಸಖ್ಯ ತೊರೆದಿತ್ತು. ಇದಾದ ಬಳಿಕ ಇತ್ತೀಚೆಗೆ ಕೃಷಿ ಕಾಯಿದೆ ವಿಚಾರದಲ್ಲಿ ಮುನಿಸಿಕೊಂಡು ಅಕಾಲಿ ದಳವೂ ಎನ್‌ಡಿಎನಿಂದ ಹೊರ ಬಿದ್ದಿತ್ತು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಸಂಬಂಧಿ ಕಾಯಿದೆಗಳನ್ನು ವಿರೋಧಿಸಿ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶದ ರೈತರು ದಿಲ್ಲಿಯಲ್ಲಿ ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಅಕ್ಕ ಪಕ್ಕದ ರಾಜ್ಯಗಳ ರೈತರೂ ಬಂದು ಸೇರ್ಪಡೆಯಾಗುತ್ತಿದ್ದಾರೆ. ಇದರ ನಡುವೆಯೇ ಮಿತ್ರ ಪಕ್ಷದ ನಡೆಯಿಂದ ಬಿಜೆಪಿ ಆಘಾತಕ್ಕೊಳಗಾಗಿದೆ.

Comments are closed.