ಮುಂಬೈ

ಖ್ಯಾತ ಕವಿ ವರವರ ರಾವ್ ಗೆ ಜ.7ರ ವರೆಗೆ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ: ಬಾಂಬೆ ಹೈಕೋರ್ಟ್

Pinterest LinkedIn Tumblr


ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಹಾಗೂ ಖ್ಯಾತ ಕವಿ ವರವರ ರಾವ್ ಅವರು ಮುಂದಿನ ವರ್ಷ ಜನವರಿ 7ರ ವರೆಗೆ ಮುಂಬೈನ ನಾನಾವತಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಸೋಮವಾರ ಬಾಂಬೆ ಹೈಕೋರ್ಟ್ ಹೇಳಿದೆ.

ಹೈಕೋರ್ಟ್ ಮಧ್ಯ ಪ್ರವೇಶಿಸಿದ ಬಳಿಕ ಮಹಾರಾಷ್ಟ್ರ ಸರ್ಕಾರ ಜೈಲಿನಲ್ಲಿದ್ದ 81 ವರ್ಷದ ವರವರ ರಾವ್ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿದ್ದು, ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಜಾಮೀನು ಕೋರಿ ವರವರ ರಾವ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ಎಸ್ ಶಿಂದೆ ಮತ್ತು ಎಂಎಸ್ ಕಾರ್ನಿಕ್ ಅವರು, ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಧಿಯನ್ನು ಜನವರಿ 7ರ ವರೆಗೆ ವಿಸ್ತರಿಸಿದ್ದಾರೆ.

ವರವರ ರಾವ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆ ಹೊಸದಾಗಿ ವೈದ್ಯಕೀಯ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ವರವರ ರಾವ್ ಅವರ ಪತ್ನಿ ಹೇಮಲತಾ ಅವರು, ತಮ್ಮ ಪತಿಯ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು, ಅವರನ್ನು ಕೂಡಲೇ ನಾನಾವತಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ವರವರ ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಿತ್ತು.

Comments are closed.