
ಲಖನೌ: ಉತ್ತರ ಪ್ರದೇಶದ ಹಾರ್ಡೋಯಿ ಜಿಲ್ಲೆ ಪನುವಾರ್ ಗ್ರಾಮದ ವ್ಯಕ್ತಿಯೊಬ್ಬ ತಾನು ನಂಬುವ ದೇವರಿಗೆ ವಿಶೇಷ ಪೂಜೆ ಅರ್ಪಿಸಿದ್ದಾನೆ. ದೇವರಿಗೆ ಬಲಿ ಹೆಸರಿನಲ್ಲಿ ತಂದೆಯ ಕೈ ಬೆರಳನ್ನೇ ಕತ್ತರಿಸಿದ್ದು, ಪತ್ನಿಯ ಕುತ್ತಿಗೆಯನ್ನೇ ಕೊಯ್ದಿದ್ದಾನೆ.
ಆರೋಪಿ ರಾತ್ರಿ ವೇಳೆ ಪೂಜೆ ಮಾಡಲು ಮುಂದಾಗಿದ್ದಾನೆ. ದೇವರ ಪೂಜೆ ಮಾಡುತ್ತಾ ತಂತ್ರ ಮಂತ್ರದ ಬಗ್ಗೆ ಪ್ರೇರೇಪಿತನಾದ ಆತ ತನ್ನ ತಂದೆಯನ್ನು ಬಳಿಗೆ ಕರೆದಿದ್ದಾನೆ. ನೀನು ದೇವರನ್ನು ಮೆಚ್ಚಿಸಬೇಕೆಂದರೆ ನಾನು ಹೇಳಿದಂತೆ ಮಾಡು ಎಂದಿದ್ದಾನೆ. ಮಗ ಏನು ಮಾಡಬಹುದೆಂದು ಗೊತ್ತಿರದ ತಂದೆ ಅವನ ಮಾತಿಗೆ ಒಪ್ಪಿ ಅವನೆದುರು ಕುಳಿತಿದ್ದಾನೆ. ಆಗ ಚಾಕು ತೆಗೆದ ಮಗ ಅಪ್ಪನ ಕೈ ಬೆರಳನ್ನೇ ಕತ್ತರಿಸಿ ಹಾಕಿದ್ದಾನೆ. ನೋವಿನಿಂದ ಎದ್ದ ತಂದೆ, ಮಗನಿಂದ ರಕ್ಷಿಸಿಕೊಳ್ಳಲು ಮನೆ ಬಿಟ್ಟು ಓಡಿದ್ದಾನೆ.
ತಂದೆ ಮನೆ ಬಿಟ್ಟು ಹೋಗುತ್ತಿದ್ದಂತೆ, ಮಗ ತನ್ನ ಪತ್ನಿಯಿದ್ದ ರೂಮಿಗೆ ಹೋಗಿದ್ದಾನೆ. ರೂಮಿನ ಬಾಗಿಲು ಹಾಕಿ ಅವಳ ಕುತ್ತಿಗೆಯನ್ನೇ ಕೊಯ್ದಿದ್ದಾನೆ. ಹೆಂಡತಿಯ ಶವವನ್ನು ರೂಮಿನಿಂದ ಎಳೆದುತಂದು ದೇವರ ಮುಂದಿಟ್ಟು ವಿಚಿತ್ರ ರೀತಿಯಲ್ಲಿ ಪೂಜೆ ಮಾಡಲಾರಂಭಿಸಿದ್ದಾನೆ.
ಸ್ಥಳೀಯರಿಂದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತಳಾದ ಪತ್ನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಕೊಲೆಗೆ ನಿಜವಾದ ಕಾರಣವನ್ನು ತನಿಖೆಯ ನಂತರ ತಿಳಿದುಕೊಳ್ಳಬೇಕಿದೆ.
Comments are closed.