ಕರ್ನಾಟಕ

ನಟಿ ಖುಷ್ಬೂ ಬಳಿಕ ಮತ್ತೊಬ್ಬಖ್ಯಾತ ನಟಿ ಬಿಜೆಪಿ ಸೇರ್ಪಡೆ

Pinterest LinkedIn Tumblr

 

ನವದೆಹಲಿ : ನಟಿ, ಮಾಜಿ ಸಂಸದೆ ವಿಜಯಶಾಂತಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಗೃಹ ಸಚಿವ ಅಮಿತ್​ ಶಾರನ್ನ ಭೇಟಿಯಾದ ಕೇವಲ ಒಂದು ದಿನದ ಬಳಿಕ ವಾರಾಂತ್ಯದಲ್ಲಿ ಕಾಂಗ್ರೆಸ್​ ಪಕ್ಷವನ್ನ ತೊರೆದಿದ್ದ ನಟಿ – ರಾಜಕಾರಣಿ ವಿಜಯಶಾಂತಿ ಅವರು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ವಿಜಯಶಾಂತಿ ಇತ್ತೀಚೆಗೆ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿತ್ತು. ಇಂದು ಅಧಿಕೃತವಾಗಿ ಕರ್ನಾಟಕ ಬಿಜೆಪಿ ಉಸ್ತುವಾರು ಅರುಣ್ ಸಿಂಗ್ ಹಾಗೂ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ನಿನ್ನೆಯಷ್ಟೇ ವಿಜಯಶಾಂತಿ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಿದ್ದರು. ಇತ್ತೀಚೆಗೆ ನಟಿ ಖುಷ್ಬೂ ಸಹ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ವಿಜಯಶಾಂತಿ ಸಹ ಖುಷ್ಬೂ ಅವರ ದಾರಿಯನ್ನೇ ತುಳಿದಿದ್ದಾರೆ.

54 ವರ್ಷದ ವಿಜಯಶಾಂತಿ 1997ರಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ತಾರೆಯಾಗಿದ್ದ ಸಂದರ್ಭದಲ್ಲೇ ಬಿಜೆಪಿಯಿಂದ ರಾಜಕೀಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರತ್ಯೇಕ ತೆಲಂಗಾಣ ಹೋರಾಟದ ಸಂದರ್ಭದಲ್ಲಿ ವಿಜಯಶಾಂತಿ ಬಿಜೆಪಿ ತೊರೆದು ಟಿಆರ್​ಎಸ್​ ಸೇರ್ಪಡೆಯಾದರು. 2009ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಆಂಧ್ರಪ್ರದೇಶದಿಂದ ಬೇರ್ಪಟ್ಟು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಘೋಷಣೆಯಾಗುವ ಮುನ್ನವೇ ಅಂದರೆ 2014ರಲ್ಲಿ ವಿಜಯಶಾಂತಿ ಕಾಂಗ್ರೆಸ್​ ಸೇರಿದ್ದರು.

2023ರ ಚುನಾವಣೆಗೆ ತೆಲಂಗಾಣದಲ್ಲಿ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೆ ವಿಜಯಶಾಂತಿ ಬಿಜೆಪಿಗೆ ಮರಳಿ ಬಂದಿದ್ದಾರೆ. ಬಿಜೆಪಿ ನಾಯಕ ಅರುಣ್ ಸಿಂಗ್, ಭೂಪೇಂದ್ರ ಯಾದವ್, ಸಂಜಯ್ ಕುಮಾರ್ ಮತ್ತು ತೆಲಂಗಾಣದ ಇತರೆ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

Comments are closed.