ಕುಂದಾಪುರ: ಮದುವೆ ನಿಶ್ಚಯವಾದ ಬಳಿಕ ವರದಕ್ಷಿಣೆಗೆ ಬೇಡಿಕೆ ಇಟ್ಟು ಮದುವೆ ಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ಯುವಕನ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕಿನ ನಾಡ ನಿವಾಸಿ ಮುರಳೀಧರ ನಾಯಕ ಅವರ ಮಗಳಾದ ಸ್ಪೂರ್ತಿ ಎಂ ನಾಯಕ್ ರವರಿಗೆ ಉಡುಪಿಯ ನಿಟ್ಟೂರು, ಹನುಮಂತ ನಗರದ ಗೋವರ್ಧನ ಆರ್ ನಾಯಕ್ ಎಂಬುವವರೊಂದಿಗೆ ಆ.16ರಂದು ನಾಡ ಗುಡ್ಡೆಯಂಗಡಿಯ ಕಲ್ಯಾಣ ಮಂಟಪದಲ್ಲಿ ವಿವಾಹ ನಿಶ್ಚಿತಾರ್ಥವಾಗಿದ್ದು, ದಿನಾಂಕ 2021 ಫೆ.14ರಂದು ತ್ರಾಸಿಯ ಸಭಾಭವನದಲ್ಲಿ ವಿವಾಹ ನಡೆಸಲು ಹಾಲ್ ಬುಕ್ಕಿಂಗ್ ಮಾಡಲಾಗಿತ್ತು. ನಿಶ್ಚಿತಾರ್ಥದ ಸಂದರ್ಭದಲ್ಲಿ ಒಂದು ಉಂಗುರ, ಬ್ರಾಸ್ಲೈಟ್ ಹಾಗೂ ಚಿನ್ನದ ಸರವನ್ನು ಯುವತಿಯ ತಂದೆ ವರನಿಗೆ ಉಡುಗೊರೆಯಾಗಿ ನೀಡಿದ್ದರು. ನಿಶ್ಚಿತಾರ್ಥ ಬಳಿಕ ಆರೋಪಿ ಗೋವರ್ಧನ ಆರ್ ನಾಯಕ್ ಸ್ಪೂರ್ತಿಯವರೊಂದಿಗೆ ತಿರುಗಾಡುವಾಗ ತನಗೆ 10 ಲಕ್ಷ ರೂ ನಗದು ಹಾಗೂ 50 ಪವನ್ ಚಿನ್ನವನ್ನು ಕೊಟ್ಟರೆ ಮಾತ್ರ ನಿನ್ನನ್ನು ಮದುವೆಯಾಗುತ್ತೇನೆ ಎಂದು ಬೇಡಿಕೆ ಇಟ್ಟಿದ್ದ. ಅಲ್ಲದೇ ಅ.11ರಂದು ಯುವತಿ ಸ್ಫೂರ್ತಿಯ ತಂದೆ ಆರೋಪಿ ಮನೆಗೆ ಹೋದಾಗ ಆತನ ತಾಯಿ ರೇಖಾ ಯಾನೆ ರೂಪಾ ನಾಯಕ್ ಹಾಗೂ ಅಣ್ಣ ಯೋಗೀಶ್ ನಾಯಕ್ ಅವರು ಮುರಳೀಧರ್ ಬಳಿ 10 ಲಕ್ಷ ರೂ ನಗದು ಹಾಗೂ 50 ಪವನ್ ಚಿನ್ನವನ್ನು ಕೊಟ್ಟರೆ ಮಾತ್ರ ಸ್ಪೂರ್ತಿಯನ್ನು ಮದುವೆ ಮಾಡಿಸುವುದಾಗಿ ಬೇಡಿಕೆ ಇಟ್ಟು, ತಾಕೀತು ಮಾಡಿದ್ದರು. ಇದಕ್ಕೆ ಮುರಳೀಧರ್ ನಾಯಕ್ ಆಕ್ಷೇಪಿಸಿದಾಗ ಗೋವರ್ಧನ್ ಅ. 22ರಂದು ಮುರಳೀಧರ ಅವರಿಗೆ ಕರೆ ಮಾಡಿ “ನಿಮ್ಮ ಮಗಳನ್ನು ನಾನು ಮದುವೆಯಾಗುವುದಿಲ್ಲ, ನಿಮ್ಮ ಮಗಳು ಸಾಯಲಿ, ನಾನು ಒಂದೊಮ್ಮೆ ಅವಳನ್ನು ಮದುವೆಯಾದಲ್ಲಿ ನನ್ನ ಮನಸ್ಸಿನಂತೆ ಆಕೆಗೆ ಸಂಸಾರ ನಡೆಸಲು ಯೋಗ್ಯತೆ ಇಲ್ಲ ಅವಳಿಗೆ ವಿಷ ಕೊಟ್ಟು ಸಾಯಿಸಿ’ ಎಂದು ಹೇಳಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ಮನ ನೊಂದ ಸ್ಪೂರ್ತಿಯವರು ವಿಷ ಸೇವಿಸಿ ನ.7 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಬಗ್ಗೆ ಆತ್ಮಹತ್ಯೆ ಪ್ರಚೋದನೆ ನೀಡಿದ್ದಾರೆಂದು ಸ್ಪೂರ್ತಿ ತಂದೆ ಮುರಳೀಧರ್ ನಾಯಕ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.