ಕರ್ನಾಟಕ

ಹಾಲಿ ಸಚಿವರನ್ನು ಕೈ ಬಿಟ್ಟು ನಮಗೂ ಸಚಿವ ಸ್ಥಾನ ಕೊಡಿ: ಎಂ.ಪಿ. ರೇಣುಕಾಚಾರ್ಯ ಒತ್ತಾಯ

Pinterest LinkedIn Tumblr

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗುತ್ತಿದ್ದಂತೆ ಆಕಾಂಕ್ಷಿಗಳ ಪಟ್ಟಿ, ಒತ್ತಡ ಹೆಚ್ಚುತ್ತಲೇ ಇದೆ. ಈ ಸಾಲಿನಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೂಡ ಇದ್ದು, ಹಾಲಿ ಸಚಿವರ ಕೈ ಬಿಡಿ, ನಮಗೂ ಅವಕಾಶ ಕೊಡಿ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳು ತಮಗೂ ಮಂತ್ರಿ ಸ್ಥಾನ ಬೇಕೆಂದು ಈಗಾಗಲೇ ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ದುಂಬಾಲು ಬಿದ್ದಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಸಚಿವ ಎಚ್​.ವಿಶ್ವನಾಥ್ ಕೂಡ ತನಗೆ ಸಚಿವ ಸ್ಥಾನ ಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು.

ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿರುವ ರೇಣುಕಾಚಾರ್ಯ, ಇಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದ್ದೆ. ರಾಜಕೀಯ ವಿದ್ಯಾಮಾನಗಳು ಹಾಗೂ ವಾಸ್ತವ ಸ್ಥಿತಿಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಹಾಲಿ ಸಚಿವರ ಕೈ ಬಿಟ್ಟು, ಹೊಸಬರಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇನೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ನೋಡೋಣ ಎಲ್ಲವೂ ಭಗವಂತನ ಇಚ್ಚೆ. ಈ ಬಗ್ಗೆ ರಾಜ್ಯಾಧ್ಯಕ್ಷರು, ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಮೂರು ಬಾರಿ ಶಾಸಕನಾಗಿದ್ದೇನೆ ನನಗೂ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಒಂದು ಗಂಟೆ ಕಾಲ ನಳೀನ್ ಕುಮಾರ್​ ಕಟೀಲ್ ಚರ್ಚೆ ಮಾಡಿದ್ದಾರೆ. ನನಗೆ ಅವರು ಯಾವುದೇ ನೋಟಿಸ್ ಕೊಟ್ಟಿಲ್ಲ. ನಾನೇ ಬಂದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದರು ರೇಣುಕಾಚಾರ್ಯ.

ಇನ್ನು, ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ರಾಮ ರಾಮ ಅಂತಾ ಒಬ್ಬರ ಹೆಸರನ್ನು ನಾನು ಜಪ ಮಾಡಲ್ಲ, ಅವರ ಹೆಸರು ಕೂಡ ಹೇಳಲ್ಲ. ರಾಮ ರಾಮ ಅಂತಾ ಜಪ ಮಾಡಿದರೆ ಅವರು ರಾಮ ಆಗ್ತಾರೆ. ನಾನು ರಾವಣ ಆಗಬೇಕಾಗುತ್ತದೆ. ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ನಾವಂತೂ ಸುಮ್ಮನೆ ಇರಲ್ಲ ಎಂದು ಹೆಸರು ಪ್ರಸ್ತಾಪ ಮಾಡದೇ, ಸಚಿವ ಸ್ಥಾನದ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್​ ವಿರುದ್ಧ ವಾಗ್ದಾಳಿ ನಡೆಸಿದರು.

Comments are closed.