
ಬೆಂಗಳೂರು : ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಸಿಸಿಬಿಯಿಂದ ನಿನ್ನೆ ರಾತ್ರಿ ಬಂಧನಕ್ಕೊಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ ನ.19ರವರೆಗೆ ಸಿಸಿಬಿ ಕಸ್ಟಡಿಗೆ ನೀಡುವಂತೆ ಆದೇಶ ಮಾಡಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಹಾಗೂ ಶಾಸಕರ ಮನೆಗೆ ಬೆಂಕಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಪತ್ ರಾಜ್ ಅವರನ್ನು ನಿನ್ನೆ ರಾತ್ರಿ ಸ್ನೇಹಿತನ ಮನೆಯಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇಂದು ಮಧ್ಯಾಹ್ನ ಅವರನ್ನು ಸಿಟಿ ಸಿವಿಲ್ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶೆ ಕಾತ್ಯಾಯಿನಿ, ಮೊದಲಿಗೆ ಸಂಪತ್ ರಾಜ್ ಅವರ ಹೆಸರು, ವಿಳಾಸ ಕೇಳಿದ್ದಾರೆ. ನಂತರ ಎಷ್ಟು ಗಂಟೆಗೆ ನಿಮ್ಮನ್ನು ಹಿಡಿದರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಂಪತ್ ರಾಜ್ ನಿನ್ನೆ 10 ಗಂಟೆಗೆ ಹಿಡಿದರು ಎಂದು ಉತ್ತರ ನೀಡಿದ್ದಾರೆ. ನಂತರ ನ್ಯಾಯಾಧೀಶೆ ವಕಾಲತ್ಗೆ ಸಹಿ ಹಾಕಿಸಿಕೊಳ್ಳಲು ವಕೀಲರಿಗೆ ಅನುಮತಿ ನೀಡಿದ್ದಾರೆ.
ಸಂಪತ್ ರಾಜ್ ಪರ ವಕೀಲ ಮಹೇಶ್ ವಕಾಲತ್ ಅರ್ಜಿ ಹಾಕಿದರು. ನಂತರ 10 ದಿನ ಕಸ್ಟಡಿಗೆ ನೀಡುವಂತೆ ಸಿಸಿಬಿ ಎಸ್ ಪಿಪಿ ಪ್ರಸನ್ನಕುಮಾರ್ ಮನವಿ ಮಾಡಿದರು. ಸಿಸಿಬಿ ಪರ ವಕೀಲರ ಮನವಿಯಂತೆ ಈಗಾಗಲೇ ಆರೋಪಪಟ್ಟಿ ದಾಖಲಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಕಾತ್ಯಾಯಿನಿ ನವೆಂಬರ್19 ರವರೆಗೆ ಅಂದರೆ ಎರಡು ದಿನಗಳ ಕಾಲ ಸಂಪತ್ ರಾಜ್ ಅವರನ್ನು ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್, ಗಲಭೆ ಪ್ರಕರಣದ ಆರೋಪದಲ್ಲಿ ತನ್ನ ಹೆಸರು ಕೇಳಿಬರುತಿದ್ದಂತೆಯೇ ಕೊರೊನಾ ಸೋಂಕು ತಗುಲಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು.
ಗುಣಮುಖರಾದ ಬಳಿಕ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದರು. ನಿನ್ನೆ ರಾತ್ರಿ ಸ್ನೇಹಿತನ ಮನೆಗೆ ಬಂದಿದ್ದ ಸಂಪತ್ ರಾಜ್ ಅವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇಂದು ಮಧ್ಯಾಹ್ನ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ನಗರದ 67ನೇ ಸಿಸಿಹೆಚ್ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದಂತ 67ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶರು, ನ್ಯಾಯಾಂಗ ಬಂಧನಕ್ಕೆ ವಿಧಿಸಿ, ಆದೇಶಿಸಿದ್ದಾರೆ.
Comments are closed.