
ವಾಷಿಂಗ್ಟನ್: ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಅಮೆರಿಕದಲ್ಲಿ ನಿನ್ನೆ ಒಂದೇ ದಿನ ಬರೊಬ್ಬರಿ 1,50,000 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಕೊರೋನಾ ವೈರಸ್ ಸೋಂಕು ಪ್ರಸರಣ ಆರಂಭವಾದ ದಿನದಿಂದ ಈವರೆಗೂ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಒಂದು ಲಕ್ಷದ ಆಸುಪಾಸಿನಲ್ಲಿದ್ದ ಹೊಸ ಸೋಂಕಿತರ ಪ್ರಮಾಣ ಇದೀಗ ಏಕಾಏಕಿ 1.50 ಲಕ್ಷ ಗಡಿ ದಾಟಿದ್ದು ಸೋಂಕು ನಿಯಂತ್ರಣದಲ್ಲಿಲ್ಲ ಎಂಬುದನ್ನು ಖಾತ್ರಿ ಪಡಿಸಿವೆ.
ಕಳೆದ ಇಡೀ ವಾರ ಅಮೆರಿಕದಲ್ಲಿ ನಿತ್ಯ 1 ಲಕ್ಷಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿತ್ತು. ಕಳೆದ 9 ದಿನಗಳ ಪೈಕಿ 6 ದಿನಗಳ ದಾಖಲಾದ ದೈನಂದಿನ ಹೊಸ ಸೋಂಕು ಪ್ರಕರಣಗಳು ಈ ಹಿಂದಿನ ಎಲ್ಲ ದಾಖಲೆಗಳನ್ನೂ ಹಿಂದಿಕ್ಕಿದ್ದವು. ಕೇವಲ ಹೊಸ ಸೋಂಕು ಪ್ರಕರಣಗಳು ಮಾತ್ರವಲ್ಲ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲೂ ಅಮೆರಿಕ ದಾಖಲೆ ಬರೆದಿದ್ದು, ನಿನ್ನೆ ಒಂದೇ ದಿನ 67,096 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಮೂರನೇ ಅತ್ಯಂತ ಗರಿಷ್ಟ ಸಂಖ್ಯೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಕೊರೋನಾ ಸಾವಿನ ಪ್ರಮಾಣದಲ್ಲೂ ಅಮೆರಿಕ ಅಗ್ರ ಸ್ಥಾನದಲ್ಲಿದ್ದು, ಪ್ರತೀ ದಿನ ಸರಾಸರಿ 1 ಸಾವಿರ ಮಂದಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ, ಈ ಕುರಿತು ಮಾತನಾಡಿರುವ ಇಲಿನಾಯ್ಸ್ ಗವರ್ನರ್ ಜೆಬಿ ಪ್ರಿಟ್ಜ್ಕರ್ ಅವರು ಸ್ಟೇ ಅಟ್ ಹೋಮ್ ಆದೇಶ ಜಾರಿಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಕಳೆದ ವಾರ ಇಲ್ಲಿ 75 ಸಾವಿರ ಹೊಸ ಸೋಂಕು ಪ್ರಕರಣಗಳು ದಾಖಲಾಗಿತ್ತು.
Comments are closed.