
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಏಕಾಏಕಿ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. “ನಾನು ನಿವೃತ್ತಿಯಾಗುತ್ತೇನೆ” ಎಂದು ನವೆಂಬರ್ 2ರಂದು ಟ್ವಿಟ್ ಮಾಡುವ ಮೂಲಕ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ 25ರ ಹರೆಯದ ಪಿವಿ ಸಿಂಧು ಕ್ರೀಡಾ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.
ನಾನು ನಿವೃತ್ತಿಯಾಗುತ್ತಿದ್ದೇನೆ. ಡೆನ್ಮಾರ್ಕ್ ಓಪನ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗದಿರುವುದು ನಿರಾಸೆ ತಂದಿದೆ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪಿ.ವಿ. ಸಿಂಧು ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ.
ಆದರೆ ನಿಜವಾಗಿ ಸಿಂಧು ಕ್ರೀಡೆಯಿಂದ ನಿವೃತ್ತರಾಗಿಲ್ಲ. ಹಾಗಾದರೆ ಪಿವಿ ಸಿಂಧು ಏಕಾಏಕಿ ನಿವೃತ್ತಿ ಬಗ್ಗೆ ಬರೆದುಕೊಂಡಿರುವುದೇಕೆ? ಆದರೆ ಸಿಂಧು ಬರೆದಿರುವ ಮೂರು ಪುಟಗಳ ದೀರ್ಘ ಪೋಸ್ಟ್ ಅನ್ನು ಓದಿದರೆ ಇದರ ಹಿಂದಿನ ಸತ್ಯಾಂಶ ಬಯಲಾಗುತ್ತದೆ.
ಕೊರೋನದಿಂದ ಉಂಟಾಗಿರುವ ಅನಿಶ್ಚಿತತೆ ಬಗ್ಗೆ ಅವರು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ ಅಷ್ಟೆ. ಪ್ರಸ್ತುತ ಅಶಾಂತಿ ಸ್ಥಿತಿ, ನಕರಾತ್ಮಕತೆ ಹಾಗೂ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣದ ಕೊರತೆಯಿಂದಾಗಿ ನಾನು ‘ನಿವೃತ್ತಿ’ಯಾಗುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ನಾನೀಗ ಸಂಪೂರ್ಣವಾಗಿ ನನ್ನ ಹೊಸತನದ ಆಲೋಚನೆಗಳೊಂದಿಗೆ ಬರುತ್ತಿದ್ದೇನೆ. ಸಾಕಷ್ಟು ದಿನಗಳಿಂದ ನಾನು ಹೆಣಗಾಡುತ್ತಿದ್ದೇನೆ. ಇದು ನನ್ನಲ್ಲಿ ತಪ್ಪು ಭಾವನೆ ಮೂಡಿಸುತ್ತಿದೆ. ನಿಮಗೂ ಗೊತ್ತಿದೆ. ಆ ಕಾರಣಕ್ಕಾಗಿಯೇ ನಾನು ಈ ಪೋಸ್ಟ್ ಅನ್ನು ಬರೆದಿದ್ದೇನೆ.
ಒಂದು ವೇಳೆ ನೀವು ಆಘಾತ ಅಥವಾ ಗೊಂದಲಕ್ಕೆ ಒಳಗಾಗಬಹುದು. ಆದರೆ ನೀವು ನನ್ನ ಪತ್ರವನ್ನು ಸಂಪೂರ್ಣ ಓದಿದ ನಂತರ ನಿಮಗೆ ನನ್ನ ನಿವೃತ್ತಿ ಯಾವುದಕ್ಕೆ ಎಂಬ ಚಿತ್ರಣ ಸಿಗುತ್ತದೆ ಎಂದು ಸಿಂಧು ಬರೆದುಕೊಂಡಿದ್ದಾರೆ.
ಕೋವಿಡ್ 19 ಸೋಂಕಿನ ಕಾಲಘಟ್ಟ ನನ್ನ ಕಣ್ಣು ತೆರೆಸಿರುವ ಕಾಲವಾಗಿದೆ. ನನ್ನ ಎದುರಾಳಿ ವಿರುದ್ಧ ಪ್ರಬಲ ಪೈಪೋಟಿ ನೀಡಲು ನಾನು ಕಠಿಣ ತರಬೇತಿ ಪಡೆಯುತ್ತಿದ್ದೇನೆ. ಈ ಹಿಂದೆಯೂ ಇದೇ ತರಬೇತಿ ಪಡೆಯುತ್ತಿದ್ದೆ, ಆದರೆ ಈ ಕಣ್ಣಿಗೆ ಕಾಣದ ವೈರಸ್ ಅನ್ನು ನಾನು ಹೇಗೆ ಸೋಲಿಸಲಿ? ಇಡೀ ಜಗತ್ತೇ ಇದರ ವಿರುದ್ಧ ಹೋರಾಡುತ್ತಿದೆ. ನನ್ನ ಮುಂದೆ ಹಲವಾರು ಪ್ರಶ್ನೆಗಳು ಸುಳಿದಾಡುತ್ತಿದೆ. ಅಲ್ಲದೇ ಡೆನ್ಮಾರ್ಕ್ ಓಪನ್ ನಲ್ಲಿ ನಾನು ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಂಧು ತಿಳಿಸಿದ್ದಾರೆ.
.ಬಹುಶಃ ನಾನು ನಿಮಗೆ ಸೌಮ್ಯ ಆಘಾತವನ್ನು ನೀಡಿದ್ದೇನೆ, ಆದರೆ ಅಸಾಮಾನ್ಯ ಕಾಲದಲ್ಲಿ, ನೀವು ಅಸಾಮಾನ್ಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು, ನಾನು ಈ ವಿಷಯಗಳ ಅರಿವನ್ನು ತೆಗೆದುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಕರಾಳ ಮಾರ್ಗಗಳ ಹೊರಗೆ ಹೊಳೆಯುವ ಬೆಳಕನ್ನು ನಾವು ನಿರೀಕ್ಷಿಸಬೇಕು ಎಂದು ಪಿ.ವಿ. ಸಿಂಧು ಸಂದೇಶ ನೀಡಿದ್ದಾರೆ.
ನಾನು ನನ್ನ ಬ್ಯಾಡ್ಮಿಂಟನ್ ಕ್ಷೇತ್ರದಿಂದ ನಿವೃತ್ತಿ ಪಡೆಯುತ್ತಿಲ್ಲ, ಬದಲಾಗಿ ಪ್ರಸ್ತುತ ಕೋವಿಡ್ ನ ಸನ್ನಿವೇಶದಿಂದ ನಾನು ನಿವೃತ್ತಿಯನ್ನು ಆಯ್ಕೆ ಮಾಡಿಕೊಂಡು ನೆಗೆಟಿವಿಟಿಯಿಂದ, ಪ್ರಸ್ತುತ ಭಯದಿಂದ ಮತ್ತು ಅನಿಶ್ಚಿತತೆಯಿಂದ ನಿವೃತ್ತಿಯಾಗಿ ಮುಂದಿನ ಸ್ಪರ್ಧೆಗೆ ಹೊಸ ಹುಮ್ಮಸ್ಸಿನಿಂದ ಆಟವಾಡಲು ಅಣಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧು ಟ್ವೀಟ್ ನ ಕೊನೆಯಲ್ಲಿ ಟ್ವಿಸ್ಟ್ ನೀಡುವ ಮೂಲಕ ಅಭಿಮಾನಿಗಳಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
Comments are closed.