ಅಂತರಾಷ್ಟ್ರೀಯ

ಅದಾನಿ ಸಂಸ್ಥೆಗೆ ಹಸ್ತಾಂತರಗೊಂಡ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

Pinterest LinkedIn Tumblr

 

 

ಮಂಗಳೂರು: ಅದಾನಿ ಸಂಸ್ಥೆ ಅಕ್ಟೋಬರ್ 30ರಂದು ಮಧ್ಯರಾತ್ರಿಯಿಂದ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಂಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಕಾರ, ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹದ ಕಂಪನಿಯು ವಹಿಸಿಕೊಂಡಿದೆ.

ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹ ಸಂಸ್ಥೆ ಶುಕ್ರವಾರ ಮಧ್ಯರಾತ್ರಿಯಿಂದ ವಹಿಸಿಕೊಂಡಿದೆ. ಅಧಿಕೃತ ಹಸ್ತಾಂತರ ಪ್ರಕ್ರಿಯೆಯು ಶುಕ್ರವಾರ ಮಧ್ಯರಾತ್ರಿ ವಿಮಾನ ನಿಲ್ದಾಣದಲ್ಲಿ ನಡೆಯಿತು.

ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್ ಅವರು, ಅದಾನಿ ಮಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್ ಲಿಮಿಟೆಡ್‌ನ ಸಿಇಒ ಅಶುತೋಷ್‌ ಚಂದ್ರ ಅವರಿಗೆ ವಿಮಾನ ನಿಲ್ದಾಣವನ್ನು ಹಸ್ತಾಂತರಿಸಿದರು.

ಅದಾನಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಮಾನ ನಿಲ್ದಾಣ ನಿರ್ವಹಣೆಯನ್ನು ಹಸ್ತಾಂತರಿಸುವ ಮೊದಲು ಪೂಜೆ ನೆರವೇರಿಸಿದರು.

ಅದಾನಿ ಏರ್‌ಪೋರ್ಟ್‌ನ ಸಿಇಒ ಬೆಹ್ನಾದ್‌ ಝಂಡಿ, ಆರ್‌. ಮಾಧವನ್‌, ಬಿ.ಕೆ. ಮಲ್ಹೋತ್ರಾ ಈ ಸಂದರ್ಭದಲ್ಲಿ ಇದ್ದರು. ನಿರ್ವಹಣೆಯನ್ನು ಹಸ್ತಾಂತರಿಸುವ ಮೊದಲು ಪೂಜೆ ನೆರವೇರಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಕೆಲವು ಜನರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಪ್ರಯಾಣಿಕರನ್ನು ಸಿಇಒ ಅಶುತೋಷ್‌ ಚಂದ್ರ ಅವರು ಹೂ ನೀಡಿ ಸ್ವಾಗತಿಸಿದರು.

ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆ ಹಸ್ತಾಂತರಿಸಲಾಗಿದ್ದರೂ, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಅದಾನಿ ಸಂಸ್ಥೆ ಎರಡೂ ಒಂದು ವರ್ಷದ ಅವಧಿಗೆ ಸಮನಾಗಿ ಕಾರ್ಯನಿರ್ವಹಿಸಲಿವೆ. ಜಂಟಿ ಕಾರ್ಯಾಚರಣೆಯ ಈ ಒಂದು ವರ್ಷದ ಅವಧಿಯಲ್ಲಿ ಹಣ ವಿನಿಮಯ, ವಿಮಾನ ನಿಲ್ದಾಣದಲ್ಲಿನ ವಾಣಿಜ್ಯ ಚಟುವಟಿಕೆಗಳು, ಲಾಭ ಮತ್ತು ನಷ್ಟವನ್ನು ಅದಾನಿ ಸಂಸ್ಥೆ ನೋಡಿಕೊಳ್ಳುತ್ತದೆ. ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಆದ್ಯತೆ ನೀಡುತ್ತದೆ ಮತ್ತು ಇಡೀ ವ್ಯವಸ್ಥೆಯಲ್ಲಿ ನಿರ್ದೇಶಕರ ಪಾತ್ರವನ್ನು ವಹಿಸುತ್ತದೆ.

ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಈ ಹಸ್ತಾಂತರ ನಡೆದಿದ್ದು, ಅದಾನಿ ಸಮೂಹ ಸಂಸ್ಥೆ ನಿರ್ವಹಣೆ ವಹಿಸಿಕೊಂಡ ಪ್ರಥಮ ವಿಮಾನ ನಿಲ್ದಾಣ ಇದಾಗಿದೆ. ಮುಂದಿನ ಮೂರು ತಿಂಗಳು ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ಅದಾನಿ ಸಂಸ್ಥೆಗೆ ಮಾರ್ಗದರ್ಶನ ನೀಡಲಿದ್ದು, ಈಗಿರುವ ಸಿಬ್ಬಂದಿಯೇ ಮೂರು ವರ್ಷಗಳವರೆಗೆ ಮುಂದುವರಿಯಲಿದ್ದಾರೆ ಎಂದು ಅದಾನಿ ಸಂಸ್ಥೆ ತಿಳಿಸಿದೆ.

ಒಂದು ವರ್ಷದ ನಂತರವೂ ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ವಿಮಾನ ನಿಲ್ದಾಣ ಪ್ರಾಧಿಕಾರವು ನಿರ್ವಹಿಸುತ್ತದೆ. ಇದರರ್ಥ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಮತ್ತು ಸಂವಹನ ಮತ್ತು ನ್ಯಾವಿಗೇಷನ್ ಸೆಂಟರ್ ಎರಡನ್ನೂ ವಿಮಾನ ನಿಲ್ದಾಣ ಪ್ರಾಧಿಕಾರವು ನೋಡಿಕೊಳ್ಳುತ್ತದೆ. ಭದ್ರತೆ ಮತ್ತು ವಿಮಾನಯಾನ ಸಿಬ್ಬಂದಿಯನ್ನು ಹೊರತುಪಡಿಸಿ, ಟರ್ಮಿನಲ್ ಕಟ್ಟಡ, ರನ್ವೇ, ವಿದ್ಯುತ್ ಮತ್ತು ನಾಗರಿಕ ಕಾರ್ಯಗಳನ್ನು ಅದಾನಿ ಸಂಸ್ಥೆ ನಿರ್ವಹಿಸುತ್ತದೆ.

ಅದಾನಿ ಸಮೂಹ ಸಂಸ್ಥೆ ನಿರ್ವಹಣೆ ವಹಿಸಿಕೊಳ್ಳುತ್ತಿದ್ದಂತೆಯೇ ವಿಮಾನ ನಿಲ್ದಾಣದ ಜತೆಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಚಿತ್ರಣವೂ ಬದಲಾಗಿದೆ. ‘ನಿಮ್ಮ ಜೀವನದ ಸುಮಧುರ ಕ್ಷಣಗಳಿಗೆ ಸ್ವಾಗತ. ಅದಾನಿ ಮಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ ನಿಮಗೆ ಉತ್ತಮ ಸೇವೆ ನೀಡಲು ಸದಾ ಉತ್ಸುಕವಾಗಿದೆ’ ಎಂಬ ಸಂದೇಶವನ್ನು ಮಧ್ಯರಾತ್ರಿ 1.29ಕ್ಕೆ ಟ್ವಿಟರ್‌ನಲ್ಲಿ ಹಾಕಲಾಗಿದೆ.

1951 ರ ಡಿಸೆಂಬರ್ 25 ರಂದು ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಡೌಗ್ಲಾಸ್‌ ಡಿಸಿ-3 ವಿಮಾನದ ಮೂಲಕ ಬಜ್ಪೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಂದಿನಿಂದಲೇ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿತ್ತು.

ಈ ವಿಮಾನ ನಿಲ್ದಾಣದ ಮೊದಲ ರನ್‌ವೇ 1951 ರಲ್ಲಿ ಉದ್ಘಾಟನೆಯಾದರೆ, ಎರಡನೇ ರನ್‌ವೇ 2006 ರಲ್ಲಿ ಪ್ರಾರಂಭವಾಗಿತ್ತು. ಅಲ್ಲದೇ ಮೊದಲ ಕ್ರಾಂಕ್ರೀಟ್ ರನ್‌ವೇ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿತ್ತು.

Comments are closed.