
ನವದೆಹಲಿ: ನೋಯ್ಡಾದಲ್ಲಿ ತಂದೆಯೊಬ್ಬ ಅಳುತ್ತಿದ್ದ ಮಗಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
ವಾಸುದೇವ್ ಗುಪ್ತ ಎಂಬಾತ ತನ್ನ ವರ್ಷದ ಮಗಳನ್ನು ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಮಗಳು ಅಳುವುದನ್ನು ನಿಲ್ಲಿಸಲು ವಿಫಲವಾದ ಅಪ್ಪ ಕೊನೆಗೆ ಈ ಕೃತ್ಯ ಎಸಗಿದ್ದಾನೆ. ಆಟೋರಿಕ್ಷಾದಲ್ಲಿ ಮಗಳ ಶವವನ್ನು ಇಟ್ಟು, ತನ್ನ ಹೆಂಡತಿಯನ್ನು ಹುಡುಕುತ್ತಿದ್ದ ಆರೋಪಿ ವಾಸುದೇವ್ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮೂಲತಃ ಸುಲ್ತಾನ್ಪುರದ ನಿವಾಸಿಯಾಗಿದ್ದು, ಆಟೋರಿಕ್ಷಾ ಓಡಿಸುತ್ತಿದ್ದ. ಕಳೆದ ಕೆಲವು ವರ್ಷಗಳಿಂದ ವಾಸುದೇವ್ ಖೋದಾ ಕಾಲೋನಿಯಲ್ಲಿ ಹೆಂಡತಿ-ಮಗಳ ಜೊತೆ ವಾಸವಾಗಿದ್ದ. ಆತನ ಹೆಂಡತಿ ನೋಯ್ಡಾದ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದಳು.
20 ದಿನಗಳ ಹಿಂದೆಯೇ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು ಎನ್ನಲಾಗಿದೆ. ಈ ಕಾರಣದಿಂದ ಆಕೆ ತನ್ನ ಗಂಡನನ್ನು ಬಿಟ್ಟು ಹೋಗಿದ್ದಳು. ತಾಯಿಯಿಂದ ದೂರವಾದ ಮಗು ಅಮ್ಮನಿಗಾಗಿ ಅಳುತ್ತಲೇ ಇತ್ತು. ವಾಸುದೇವ್ ಮಗುವಿನ ಅಳು ನಿಲ್ಲಿಸಲು ತುಂಬಾ ಪ್ರಯತ್ನಿಸಿದ. ಮಗು ಅಳು ನಿಲ್ಲಿಸದಿದ್ದಾಗ ಕೋಪಗೊಂಡ ಆತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಹೆಂಡತಿ ತನ್ನ 3 ವರ್ಷದ ಮಗನ ಜೊತೆ ಮನೆ ಬಿಟ್ಟು ಹೋಗಿದ್ದಳು. 4 ವರ್ಷದ ಮಗಳು ತಂದೆ ಗುಪ್ತ ಜೊತೆಗೆ ಉಳಿದುಕೊಂಡಿದ್ದಳು. ತಾಯಿ ಮನೆ ಬಿಟ್ಟು ಹೋದ ಬಳಿಕ ಮಗಳು ಅಮ್ಮನಿಗಾಗಿ ಅಳುತ್ತಿದ್ದಳು. ತುಂಬಾ ಸಮಯದಿಂದ ಅಳುತ್ತಲೇ ಇದ್ದ ಮಗಳನ್ನು ನೋಡಿದ ತಂದೆ ಅಳು ನಿಲ್ಲಿಸಲು ಯತ್ನಿಸಿದ್ದಾನೆ. ಆದರೆ ಮಗಳು ಅಳು ನಿಲ್ಲಿಸಿರಲಿಲ್ಲ.
ಇದರಿಂದ ಕೋಪಗೊಂಡ ಅಪ್ಪ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮಗಳ ಮೃತದೇಹವನ್ನು ಆಟೋರಿಕ್ಷಾದಲ್ಲೇ ಇಟ್ಟುಕೊಂಡು, ಹೆಂಡತಿಯನ್ನು ಹುಡಕುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Comments are closed.