ಮನೋರಂಜನೆ

ಕುತ್ತಿಗೆಗೆ ಹಾವು ಸುತ್ತಿಕೊಂಡ ತೆಲುಗು ನಟ ಸಿಂಬು!

Pinterest LinkedIn Tumblr


ಕಾಲಿವುಡ್‌ನಲ್ಲಿ ಜನಪ್ರಿಯವಾಗಿರುವ ನಟ ಸಿಂಬು ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದ ಬಗ್ಗೆ ಅಭಿಮಾನಿಗಳ ಮನದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಸೃಷ್ಟಿ ಆಗಿದೆ. ಅದಕ್ಕೆ ಕಾರಣ ನಾಗರಹಾವು!

ಈ ದಸರಾ ಹಬ್ಬದ ಸೀಸನ್‌ನಲ್ಲಿ ಅನೇಕ ಸಿನಿಮಾ ತಂಡಗಳು ಸಿನಿಪ್ರಿಯರಿಗೆ ಬಗೆಬಗೆಯ ಗಿಫ್ಟ್‌ ನೀಡುತ್ತಿವೆ. ಹೊಸ ಸಿನಿಮಾಗಳ ಘೋಷಣೆ, ಫಸ್ಟ್‌ಲುಕ್‌ ಪೋಸ್ಟರ್‌ಗಳ ಬಿಡುಗಡೆ, ನೂತನ ಚಿತ್ರದ ಶೀರ್ಷಿಕೆ ಅನಾವರಣ ಸೇರಿದಂತೆ ಬಣ್ಣದ ಲೋಕದಲ್ಲಿ ಹಲವು ಚಟುವಟಿಕೆಗಳು ಗರಿಗೆದರಿವೆ. ಈ ಸಂದರ್ಭದಲ್ಲಿ ನಟ ಸಿಂಬು ಕೊರಳಿಗೆ ಹಾವು ಸುತ್ತಿಕೊಂಡು ಬಂದು ಅಚ್ಚರಿ ನೀಡಿದ್ದಾರೆ.

ಸಿಂಬು ನಟಿಸಲಿರುವ ಹೊಸ ಕಾಲಿವುಡ್‌ ಚಿತ್ರಕ್ಕೆ ‘ಈಶ್ವರನ್‌’ ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್‌ ಅನೌನ್ಸ್‌ ಮಾಡುವುದರ ಜೊತೆಗೆ ಚಿತ್ರತಂಡ ಫಸ್ಟ್‌ಲುಕ್‌ ಮೋಷನ್ ಪೋಸ್ಟರ್‌ ಕೂಡ ರಿಲೀಸ್‌ ಮಾಡಿದೆ. ಅದರಲ್ಲಿ ಸಿಂಬು ಅವರ ಗೆಟಪ್‌ ನೋಡಿದರೆ ಅಭಿಮಾನಿಗಳಿಗೆ ಅಚ್ಚರಿ ಆಗುವುದು ಗ್ಯಾರಂಟಿ. ‘ಈಶ್ವರನ್‌’ ಎಂಬ ಶೀರ್ಷಿಕೆಗೆ ತಕ್ಕಂತೆಯೇ ಶಿವನ ರೀತಿಯಲ್ಲಿ ಕೊರಳಿಗೆ ನಾಗರಹಾವು ಸುತ್ತಿಕೊಂಡು ಸಿಂಬು ಪೋಸ್‌ ನೀಡಿದ್ದಾರೆ.

ಬುಸುಗುಡುತ್ತ, ಹೆಡೆ ಎತ್ತಿರುವ ಹಾವನ್ನು ಸಲೀಸಾಗಿ ಕೊರಳಿನಲ್ಲಿ ಇಟ್ಟುಕೊಂಡಂತೆ ಇರುವ ಸಿಂಬು ಅವರ ಈ ಫಸ್ಟ್‌ಲುಕ್‌ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರಕ್ಕಾಗಿ ಸಿಂಬು ಅವರು ಸ್ಲಿಮ್‌ ಆಗುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು. ಈ ಫಸ್ಟ್‌ಲುಕ್‌ನಲ್ಲಿ ಅದಕ್ಕೆ ಸಾಕ್ಷಿ ಸಿಕ್ಕಿದೆ. ದೇಹತೂಕವನ್ನು ಕಡಿಮೆ ಮಾಡಿಕೊಂಡಿರುವ ಸಿಂಬು ಹೊಸ ರೂಪದಲ್ಲಿ ಅಭಿಮಾನಿಗಳನ್ನು ರಂಜಿಸುವ ಭರವಸೆ ನೀಡುತ್ತಿದ್ದಾರೆ.

ಈ ಸಿನಿಮಾದ ಕೆಲಸಗಳನ್ನು ಸದ್ದಿಲ್ಲದೆ ಮುಗಿಸಿಕೊಳ್ಳಲಾಗಿದೆ. 2021ರ ಸಂಕ್ರಾಂತಿ ವೇಳೆಗೆ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಇಡೀ ಸಿನಿಮಾದಲ್ಲಿ ಕ್ರಿಕೆಟ್‌ ಮತ್ತು ಹಾವು ಮುಖ್ಯ ಅಂಶ ಆಗಿರಲಿದೆ ಎಂದು ಮೋಷನ್‌ ಮೋಸ್ಟರ್‌ ನೋಡಿದ ಅಭಿಮಾನಿಗಳು ಊಹಿಸುತ್ತಿದ್ದಾರೆ. ಅಸಲಿ ಕಥೆ ಏನು ಎಂಬುದು ಚಿತ್ರ ರಿಲೀಸ್‌ ಆದಾಗಲೇ ಗೊತ್ತಾಗಬೇಕು. ಈ ಚಿತ್ರಕ್ಕೆ ಎಸ್‌. ಥಮನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

Comments are closed.