
ಮಂಗಳೂರು, ಅಕ್ಟೋಬರ್.22 : ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಿದ್ದು, ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಂಗ್ರೆಸ್ ಮಾಜಿ ಶಾಸಕ ಬಿ.ಎ. ಮೊಯ್ದೀನ್ ಬಾವಾ ಅವರು ತಮ್ಮ ಕ್ಷೇತ್ರದ ಸುಂಕದಕಟ್ಟೆಯ ದೇವಸ್ಥಾನವೊಂದರ ಕೊಪ್ಪರಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಈ ಬೆದರಿಕೆ ಕರೆ ಬಂದಿದೆ ಎಂದು ತಿಳಿದು ಬಂದಿದೆ.
ಸುಂಕದಕಟ್ಟೆಯ ದೇವಸ್ಥಾನ ಆಡಳಿತ ಮಂಡಳಿಯ ಆಮಂತ್ರಣದಂತೆ ಮೊಯ್ದಿನ್ ಬಾವ ದೇವಾಲಯಕ್ಕೆ ತೆರಳಿ ಕೊಪ್ಪರಿಗೆಗೆ ಅಕ್ಕಿ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದರ ಬೆನ್ನಲ್ಲೇ ಮುಂಬೈನಿಂದ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾನೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸುರತ್ಕಲ್ ಠಾಣೆಗೆ ಬಾವ ದೂರು ನೀಡಿದ್ದಾರೆ.

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವ, ಪ್ರತಿವರ್ಷವೂ ನವರಾತ್ರಿ ಉತ್ಸವದ ಸಂದರ್ಭ ಮಂಗಳೂರು ಉತ್ತರ ಕ್ಷೇತ್ರದ ಭಾಗವಾಗಿರುವ ಸುಂಕದಕಟ್ಟೆಯ ದೇವಾಲಯದ ಆಡಳಿತ ಮಂಡಳಿಯವರು ನನಗೆ ಆಮಂತ್ರಣ ನೀಡುತ್ತಾರೆ. ಆಮಂತ್ರಣ ನೀಡಿದ್ದ ಹಿನ್ನೆಲೆಯಲ್ಲಿ ಈ ವರ್ಷವೂ ಸುಂಕದಕಟ್ಟೆ ಅನ್ನಪೂರ್ಣೇಶ್ವರಿ ದೇವಸ್ಥಾನ ಆಯೋಜಿಸಿದ್ದ ಪೂಜೆಯಲ್ಲಿ ಭಾಗವಹಿಸಿದ್ದೆ.
ದೇವಾಲಯದ ಟ್ರಸ್ಟಿಗಳು ಮತ್ತು ಪುರೋಹಿತರು ಬಿಜೆಪಿ ಶಾಸಕ ಭರತ್ ಶೆಟ್ಟಿಯನ್ನು ಆಹ್ವಾನಿಸಿದಂತೆ ನನ್ನನ್ನು ಆಹ್ವಾನಿಸಿದ್ದರು. ಕೆಲವು ಕಾರಣಗಳಿಂದಾಗಿ ಅವರು ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ನಾನು ಸಮಾರಂಭದಲ್ಲಿ ಭಾಗವಹಿಸಲು ಹೋದಾಗ, ಆ ಸಮಯದಲ್ಲಿ ಅಕ್ಕಿ ಸುರಿಯುವ ಆಚರಣೆ ಪ್ರಾರಂಭವಾಗಿತ್ತು,
ಈ ವೇಳೆ ಕೊಪ್ಪರಿಗೆಗೆ ಅಕ್ಕಿ ಹಾಕುವ ಕಾರ್ಯಕ್ರಮ ನೆರವೇರಿಸುವಂತೆ ನನ್ನಲ್ಲಿ ಮನವಿ ಮಾಡಿದ್ದು, ಜಾತ್ಯತೀತ ನೆಲೆಗಟ್ಟಿನಲ್ಲಿ ಈ ಕಾರ್ಯದಲ್ಲಿ ಭಾಗಿಯಾಗಿದ್ದೆ. ಪುರೋಹಿತರು ಮತ್ತು ಟ್ರಸ್ಟಿಗಳು ಅಕ್ಕಿ ಸುರಿಯಲು ಹೇಳಿದದ್ದು, ನನಗೆ ಅದನ್ನು ತಿರಸ್ಕರಿಸಲು ಆಗಲಿಲ್ಲ, ಹಾಗಾಗಿ ನಾನು ಅಕ್ಕಿ ಸುರಿಯುವ ಆಚರಣೆಯನ್ನು ಮಾಡಿದೆ.
ಆದರೆ ಕೊಪ್ಪರಿಗೆಗೆ ಅಕ್ಕಿ ಸುರಿಯುತ್ತಿರುವ ಚಿತ್ರ ವೈರಲ್ ಆಗಿದ್ದು, ಮುಂಬೈಯಿಂದ ಹನಿ ಎಂಬ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ದೇವಸ್ಥಾನದಲ್ಲಿ ಆಚರಣೆಯಲ್ಲಿ ಭಾಗಿಯಾಗಿದ್ದಕ್ಕೆ ಕರೆ ಮಾಡಿ ಬೆದರಿಕೆ ಹಾಕಿರುವ ವ್ಯಕ್ತಿ ನಾನು ನನ್ನ ಮಿತಿ ಮೀರಬಾರದು ಎಂದಿದ್ದಾರೆ ಎಂದು ಮೋಯ್ದಿನ್ ಬಾವಾ ತಿಳಿಸಿದ್ದಾರೆ.
ಈ ಬಗ್ಗೆ ಮೊಯ್ದೀನ್ ಬಾವಾ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಅಕಿಗೊಂಡಿದ್ದಾರೆ.
Comments are closed.