ಕರಾವಳಿ

ದಸರಾ ಸಂಪ್ರದಾಯ ಹುಲಿ ವೇಷ ಕುಣಿತಕ್ಕೆ ತಡೆ : ವಿವಾದಕ್ಕೆ ತೆರೆ ಎಳೆಯಲು ಶಾಸಕರ ಯತ್ನ

Pinterest LinkedIn Tumblr

ಮಂಗಳೂರು: ದಸರಾ ಅಚರಣೆಯ ವೇಳೆ ದೇವಸ್ಥಾನದ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ, ಸಂಪ್ರದಾಯ ಪ್ರಕಾರ ಹುಲಿ ವೇಷ ಕುಣಿತಕ್ಕೆ ಈ ಬಾರಿ ಅವಕಾಶ ನೀಡಲು ದ.ಕ ಜಿಲ್ಲಾಡಳಿತ ನಿರ್ಧರಿಸುವ ವಿಶ್ವಾಸವಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಕೊರೊನಾ ಕಾರಣದಿಂದ ದಸರಾ ಸಂದರ್ಭದಲ್ಲಿ ಹುಲಿ ವೇಷ ಕುಣಿತಕ್ಕೆ ದ.ಕ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೆ, ವಿವಿಧ ದೇವಸ್ಥಾನ ಹಾಗೂ ಶಾರದೋತ್ಸವ ಸಮಿತಿಯ ಪ್ರಮುಖರು ಅವಕಾಶ ನೀಡುವಂತೆ ತನಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.

ಕರಾವಳಿಯ ಮಣ್ಣಿನ ಸಂಸ್ಕೃತಿ ಸಂಸ್ಕಾರ ಹಾಗೂ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಎದುರಾಗಬಾರದು ಎಂಬ ಕಾರಣದಿಂದ ನಾನು ಈಗಾಗಲೇ ಜಿಲ್ಲಾಧಿಕಾರಿಯವರಲ್ಲಿ ಈ ವಿಷಯ ಪ್ರಸ್ತಾವಿಸಿದ್ದೇನೆ.

ಸಂಪ್ರದಾಯ ಪ್ರಕಾರವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ. ಜತೆಗೆ ಸರಕಾರದ ಉನ್ನತ ಅಧಿಕಾರಿಗಳ ಜತೆಗೂ ಚರ್ಚಿಸಿದ್ದೇನೆ.

ದೇವಸ್ಥಾನದ ಉತ್ಸವ ಹಾಗೂ ಶಾರದೋತ್ಸವ ಸಮಿತಿ ಕಾರ್ಯಕ್ರಮದ ವೇಳೆ ಕನಿಷ್ಠ ಸಂಖ್ಯೆಯಲ್ಲಿ ಹುಲಿ ವೇಷ ಕುಣಿತಕ್ಕೆ ಸಂಪ್ರದಾಯ ಪ್ರಕಾರ ಅವಕಾಶ ಕಲ್ಪಿಸುವಂತೆ ಕೋರಿದ್ದೇನೆ.

ಹೀಗಾಗಿ ಸಂಪ್ರದಾಯದಂತೆ ಹುಲಿವೇಷ ಕುಣಿತಕ್ಕೆ ಜಿಲ್ಲಾಡಳಿತ ಅವಕಾಶ ನೀಡಲಿದ್ದು, ಯಾರೂ ಕೂಡ ಆತಂಕ ಪಡುವ ಆವಶ್ಯಕತೆ ಇಲ್ಲ ಎಂದವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments are closed.