ಕರ್ನಾಟಕ

ಕೊರೋನಾ ಕಥೆ ಕಟ್ಟಿ ಪತಿ ಮನೆ ತೊರೆದು, ಬಾಯ್​ಫ್ರೆಂಡ್ ಜೊತೆ ಪರಾರಿ

Pinterest LinkedIn Tumblr


ಬೆಂಗಳೂರು: ಕೊರೋನಾ ಕಥೆ ಕಟ್ಟಿ ಪತಿಯ ಮನೆ ತೊರೆದು ಬಾಯ್ ಫ್ರೆಂಡ್ ಜೊತೆ ಪರಾರಿಯಾಗಿರುವ ಘಟನೆ ಇಲ್ಲಿಂದ ವರದಿಯಾಗಿದೆ.

ಈಕೆಯ ಹೆಸರು ರುಚಿಕುಮಾರಿ. ವಯಸ್ಸು 28 ವರ್ಷ. ಐಟಿ ಕಂಪನಿಯ ಉದ್ಯೋಗಿ. ಈಕೆಯ ಗಂಡ ವಿಕ್ಕಿ ಕುಮಾರ್ (30) ಕೂಡ ಟೆಕ್ಕಿಯೇ. ಕೋವಿಡ್ ಕಾರಣಕ್ಕೆ ಇಬ್ಬರದ್ದೂ ವರ್ಕ್ ಫ್ರಂ ಹೋಮ್. ನಿತ್ಯವೂ ಗಂಡ ಹೆಂಡತಿ ಮಧ್ಯೆ ಜಗಳ ರಂಪಾಟ. ಮನೆಯಿಂದ ಹೊರಗೆ ಹೋಗಿ ಮನಸ್ಸಿಗೆ ಶಾಂತಿ ತಂದುಕೊಳ್ಳಲು ರುಚಿಕುಮಾರಿಯ ಪ್ರಯತ್ನಕ್ಕೆ ಗಂಡನೇ ತಡೆಗೋಡೆಯಾಗಿದ್ದ. ಕೋವಿಡ್ ಕಾರಣಕ್ಕೆ ಮನೆಯಿಂದ ಹೊರಹೋಗದಂತೆ ಆತ ನಿರ್ಬಂಧ ಹಾಕಿದ್ದ. ಆದರೆ, ಹೇಗಾದರೂ ಮಾಡಿ ಗಂಡನ ಮನೆ ಬಿಟ್ಟು ಹೋಗಬೇಕೆಂದು ರುಚಿ ತೀರ್ಮಾನಿಸಿದಳು. ತತ್​ಕ್ಷಣವೇ ಆಕೆಗೆ ನೆನಪಾಗಿದ್ದು ರಾಂಚಿಯ ತನ್ನ ಗೆಳೆಯ ಮೊಹಮ್ಮದ್.

ಮೊಹಮ್ಮದ್​ಗೆ ಫೋನ್ ಮಾಡಿ ತಾನು ಮನೆ ಬಿಡಬೇಕೆಂದಿರುವ ವಿಚಾರವನ್ನು ತಿಳಿಸಿ ಮಾಸ್ಟರ್ ಪ್ಲಾನ್ ಮಾಡುತ್ತಾಳೆ. ತನಗೆ ಕೊರೋನಾ ಸೋಂಕಿದೆ ಎಂದು ಕಾರಣವೊಡ್ಡಿ ಬಿಬಿಎಂಪಿ ಸಿಬ್ಬಂದಿ ವೇಷದಲ್ಲಿ ಬಂದು ಆಂಬುಲೆನ್ಸ್ ಮೂಲಕ ತನ್ನನ್ನು ಕರೆದುಕೊಂಡು ಹೋಗು ಎಂದು ತಿಳಿಸುತ್ತಾಳೆ. ಅದರಂತೆ ರಾಂಚಿಯಿಂದ ಬರುವ ಮೊಹಮ್ದ್ ಆಂಬುಲೆನ್ಸ್​ವೊಂದನ್ನ ಬಾಡಿಗೆಗೆ ಪಡೆಯುತ್ತಾನೆ. ಸೆಪ್ಟೆಂಬರ್ 1ರಂದು ರುಚಿಕುಮಾರಿ ವಾಸವಿದ್ದ ಮನೆಗೆ ತೆರಳಿ ಕೋವಿಡ್ ಟೆಸ್ಟ್ ಮಾಡುವ ರೀತಿ ನಾಟಕ ಆಡುತ್ತಾನೆ. ಪಿಪಿಇ ಕಿಟ್ ಧರಿಸಿ ಗಂಡ ಹೆಂಡತಿ ಇಬ್ಬರಿಗೂ ಪರೀಕ್ಷೆ ಮಾಡಿ, ನಂತರ ತಮಗೆ ಫೋನ್ ಮಾಡುತ್ತೇನೆ ಎಂದು ವಾಪಸ್ ಹೋಗುತ್ತಾನೆ. ಎರಡು ದಿನಗಳ ನಂತರ ಬಂದು ರುಚಿಕುಮಾರಿಗೆ ಮಾತ್ರ ಪಾಸಿಟಿವ್ ಬಂದಿದೆ ಹೇಳಿ ಆಕೆಯನ್ನು ಆಂಬುಲೆನ್ಸ್​ಗೆ ಹತ್ತಿಸಿಕೊಳ್ಳುತ್ತಾನೆ. ಆಗ ಗಂಡ ಯಾವ ಆಸ್ಪತ್ರೆಗೆ ಎಂದು ಕೇಳಿದಾಗ ಪ್ರಶಾಂತ್ ಆಸ್ಪತ್ರೆಯ ಹೆಸರು ಹೇಳುತ್ತಾನೆ. ಆಗ ಗಂಡ ವಿಕ್ಕಿ ಕುಮಾರ್ ಸುಮ್ಮನಾಗಿ ಮನೆಯಲ್ಲೇ ಮೂರು ದಿನ ಕ್ವಾರಂಟೈನ್ ಇರುತ್ತಾನೆ.

ಆಂಬುಲೆನ್ಸ್ ಏರಿ ಹೊರಟ ಹೆಂಡತಿ ಮೂರು ದಿನಗಳಾದರೂ ಫೋನ್ ಮಾಡುವುದಿಲ್ಲ. ಗಂಡ ವಿಕ್ಕಿ ಫೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತದೆ. ಪ್ರಶಾಂತ್ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಆಕೆ ಅಲ್ಲಿ ದಾಖಲಾಗಿಲ್ಲದಿರುವುದು ತಿಳಿದುಬರುತ್ತದೆ. ಆಗ ಅನುಮಾನಗೊಂಡ ವಿಕ್ಕಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾನೆ. ಹೆಂಡತಿಗೆ ಕೊರೋನಾ ಪಾಸಿಟಿವ್ ಬಂದ ಬಿಒ ನಂಬರ್ ಕೇಳುತ್ತಾರೆ. ಆಗ ವಿಕ್ಕಿ ನಡೆದದ್ದೆಲ್ಲವನ್ನೂ ತಿಳಿಸುತ್ತಾನೆ. ಆಗ ಪೊಲೀಸರು ಇದೊಂದು ಕಿಡ್ನಾಪ್ ಪ್ರಕರಣವೆಂದು ತನಿಖೆ ನಡೆಸುತ್ತಾರೆ. ರುಚಿಕುಮಾರಿಯ ಮೊಬೈಲ್ ಟ್ರ್ಯಾಕ್ ಮಾಡುತ್ತಾರೆ. ರುಚಿಕುಮಾರಿ ಸಂಪರ್ಕದಲ್ಲಿದ್ದ ಮೊಹಮ್ಮದ್​ನ ಮೊಬೈಲ್ ಅನ್ನೂ ಪತ್ತೆ ಹಚ್ಚಿ ಟ್ರ್ಯಾಕ್ ಮಾಡುತ್ತಾರೆ. ರಾಂಚಿಗೆ ಹೋಗಿ ಮೊಹಮ್ಮದ್​ನ ಪೋಷಕರನ್ನು ಸಂಪರ್ಕಿಸುತ್ತಾರೆ.

ಆಗ ದೆಹಲಿಯಲ್ಲಿದ್ದ ರುಚಿಕುಮಾರಿಯೇ ಸ್ವತಃ ಫೋನ್ ಮಾಡಿ ತಾನು ಕಿಡ್ನಾಪ್ ಆಗಿಲ್ಲ. ಸ್ವ ಇಚ್ಛೆಯಿಂದ ಮನೆ ಬಿಟ್ಟು ಬಂದಿದ್ದಾಗಿ ತಿಳಿಸಿ, ಗಂಡನಿಂದ ಬೇಸತ್ತು ಮನೆ ಬಿಟ್ಟುಹೋಗಲು ಮಾಡಿದ ಯೋಜನೆಗಳನ್ನ ವಿವರಿಸುತ್ತಾಳೆ. ಪೊಲೀಸರು ಗಂಡ ಹೆಂಡತಿ ಇಬ್ಬರ ಹೇಳಿಕೆಯನ್ನ ದಾಖಲಿಸಿಕೊಂಡಿದ್ಧಾರೆ. ಮೊಹಮ್ಮದ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೋವಿಡ್ ಟೆಸ್ಟ್ ವಿಚಾರದಲ್ಲಿ ಜನರು ಯಾಮಾರದಂತೆಯೂ ಈ ಪ್ರಕರಣವನ್ನು ಎಚ್ಚರಿಕೆಯಾಗಿ ಪರಿಗಣಿಸಬಹುದು. ಕೋವಿಡ್ ಟೆಸ್ಟ್ ಮಾಡಿಸಿದಾಗ ಮೊಬೈಲ್​ಗೆ ಮೊದಲು ಮೆಸೇಜ್ ಬರುತ್ತದೆ. ಆ ಬಳಿಕ ಪಾಸಿಟಿವ್ ಬಿಒ ನಂಬರ್ ನೀಡಲಾಗುತ್ತದೆ. ನಿಮ್ಮ ನಂಬರ್​ಗೆ ಬಿಬಿಎಂಪಿ ಅಧಿಕಾರಿಗಳು ಕರೆ ಮಾಡಿಕೊಂಡುವಿಳಾಸ, ಮನೆಯಲ್ಲಿರುವ ಕುಟುಂಬ ಸದಸ್ಯರ ಸಂಖ್ಯೆ ವಿಚಾರಿಸುತ್ತಾರೆ. ಮನೆಗೆ ಬಂದು ಕೋವಿಡ್ ಸ್ಟಿಕರ್ ಅಂಟಿಸಿ ತಪಾಸಣೆ ಮಾಡುತ್ತಾರೆ. ಮನೆಗೆ ಬಿಬಿಎಂಪಿಯಿಂದ ಸ್ಯಾನಿಟೈಸ್ ಮಾಡಲಾಗುತ್ತದೆ. ಪ್ರತಿನಿತ್ಯ ಬಿಬಿಎಂಪಿ ಅಧಿಕಾರಿಗಳು ಸಂಪರ್ಕದಲ್ಲಿರುತ್ತಾರೆ. ಹಾಗೆಲ್ಲಾ ಸುಮ್ಮಸುಮ್ಮನೆ ವಾಹನ ತುಂಬಿಸಿಕೊಂಡು ಹೋಗುವುದಿಲ್ಲ. ಈ ವಿಚಾರವನ್ನು ಸಾರ್ವಜನಿಕರು ಗಮನಿಸಿ ಎಚ್ಚರದಿಂದರಬೇಕಾಗುತ್ತದೆ.

Comments are closed.