ಕರಾವಳಿ

ದ.ಕ.ಜಿಲ್ಲೆಯಲ್ಲಿ ಬೆಳ್ಳಂಬೆಳ್ಳಗ್ಗೆ ಗುಂಡಿನ ಸದ್ಧು : ಶೂಟೌಟ್‌ಗೆ ಕೊಡಗಿನ ಬಿಜೆಪಿ ಮುಖಂಡನ ಕೊಲೆ ಆರೋಪಿ ಬಲಿ

Pinterest LinkedIn Tumblr

ಮಂಗಳೂರು / ಸುಳ್ಯ : ಸುಳ್ಯದಲ್ಲಿ ಇಂದು ಬೆಳ್ಳಂಬೆಳ್ಳಗ್ಗೆ ಗುಂಡಿನ ಸದ್ಧು ಕೇಳಿ ಬಂದಿದ್ದು, ಕಾರಿನಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳ ತಂಡ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದೆ.

ಗುಂಡಿಗೆ ಬಲಿಯಾಗಿರುವ ವ್ಯಕ್ತಿಯನ್ನು ಕೊಡಗಿನ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಎಂಬುವವರನ್ನು ಕಳೆದ ವರ್ಷ ಕೊಲೆ ಮಾಡಿರುವ ಆರೋಪ ಹೊತ್ತ ಸಂಪತ್​ಕುಮಾರ್​ (35) ಎಂದು ಹೇಳಲಾಗಿದೆ.

ಸುಳ್ಯದ ಶಾಂತಿನಗರ ಎಂಬಲ್ಲಿ ಈ ಘಟನೆ ನಡೆದಿದ್ದು, ಸಂಪತ್ ಅವರು ಇಂದು ನಸುಕಿನ ವೇಳೆ ಸುಮಾರು 6.30ರ ಹೊತ್ತಿಗೆ ಮನೆಯಿಂದ ಕಾರಿನಲ್ಲಿ ಹೊರಡುವಷ್ಟರಲ್ಲಿ ಗುಂಡಿನ ದಾಳಿ ನಡೆದಿದೆ. ಕಾರಿನ ಗಾಜಿಗೆ ಗುಂಡೇಟು ಬಿದ್ದಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್‌ಗೆ ತಾಗಿ ನಿಂತಿದೆ. ಕೂಡಲೇ ಸಂಪತ್ ಕಾರಿನಿಂದ ಇಳಿದು ಪಕ್ಕದ ಇನ್ನೊಂದು ಮನೆಯತ್ತ ಓಡಿದ್ದಾರೆ‌. ಆದರೆ ದುಷ್ಕರ್ಮಿಗಳು ಅವರನ್ನು ಬೆನ್ನಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಗುಂಡೇಟು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಪತ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಸಂಪತ್ ಕುಮಾರ್ ಮೃತಪಟ್ಟಿದ್ದಾರೆ.

ಗುಂಡೇಟಿಗೆ ಬಲಿಯಾದ ಸಂಪತ್ ವರ್ಷದ ಹಿಂದೆ ನಡೆದ ಕೊಡಗಿನ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಎಂಬವರ ಕೊಲೆ ಪ್ರಕರಣದ ಆರೋಪಿ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇದೊಂದು ಪೂರ್ವ ದ್ವೇಷದ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆ ನಡೆದ ಸ್ಥಳಕ್ಕೆ ಸುಳ್ಯ ಪೊಲೀಸರು, ಎಫ್‍ಎಸ್‍ಎಲ್ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಸರ್ಕಲ್ ಇನ್‌ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್ ಐ ಹರೀಶ್, ಹಾಗೂ ಪೋಲೀಸರು ಸ್ಥಳದಲ್ಲಿದ್ದು ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments are closed.