ಗಲ್ಫ್

ಕುವೈಟ್’ನ ಅಮೀರ್ ಶೇಖ್ ಸಬಾಹ್ ಅಲ್ ಅಹ್ಮದ್ ಇನ್ನಿಲ್ಲ !

Pinterest LinkedIn Tumblr

ಕುವೈಟ್: ಕುವೈಟ್’ನ ಅಮೀರ್ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್ (91) ಅವರು ಇಂದು ಸಂಜೆ ವಿಧಿವಶರಾಗಿದ್ದಾರೆ.

ಅಮೆರಿಕದ ಆಸ್ಪತ್ರೆಯೊಂದರಲ್ಲಿ ಮೃತರಾದ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್, ಆಡಳಿತ ಚುಕ್ಕಾಣಿ ಹಿಡಿದ ನಂತರ ತುಂಬಾ ಹೆಸರು ಗಳಿಸಿದ್ದರು.

1929ರಲ್ಲಿ ಜನಿಸಿದ ಸಬಾಹ್ ಅಲ್ ಅಹ್ಮದ್ ಅವರು ಆಧುನಿಕ ಕುವೈತ್ ನ ವಿದೇಶಾಂಗ ನೀತಿಯ ವಾಸ್ತುಶಿಲ್ಪಿ ಎಂದೇ ಪ್ರಸಿದ್ಧರಾದವರು. 1963ರಿಂದ 2003ರವರೆಗೆ ಸುಮಾರು 40 ವರ್ಷಗಳ ಕಾಲ ಅವರು ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಶೇಖ್ ಜಾಬೀರ್ ಅಲ್ ಸಬಾಹ್ ಅವರ ನಿಧನಾ ನಂತರ ಸಬಾಹ್ ಅಲ್ ಅಹಮದ್ 2006ರ ಜನವರಿಯಲ್ಲಿ ಕುವೈತ್ ನ ದೊರೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಈ ಮೊದಲೇ ನಿಗದಿಯಾದಂತೆ ಶೇಕ್‌ ಸಬಾಹ್‌ ಅವರ ಸಹೋದರ ನವಾಫ್‌ ಅಲ್‌ ಅಹ್ಮದ್‌ ಅಲ್‌ ಸಬಾಹ್‌ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ದೊರೆಯ ಸಾವಿನ ಬೆನ್ನಲ್ಲೇ ಕುವೈತ್‌ ಸರಕಾರಿ ವಾಹಿನಿಯಲ್ಲಿ ದೈನಂದಿನ ಕಾರ್ಯಕ್ರಮಗಳ ಪ್ರಸಾರ ರದ್ದುಪಡಿಸಿ, ಶೋಕಾಚರಣೆ ಘೋಷಿಸಲಾಗಿದೆ.

ಕಳೆದ ಜೂನ್‌ನಲ್ಲಿ ದೊರೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಯಾವ ಶಸ್ತ್ರಚಿಕಿತ್ಸೆ ಎಂಬ ಬಗ್ಗೆಸರ್ಕಾರ ಮಾಹಿತಿ ನೀಡಿರಲಿಲ್ಲ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು.

ಕಳೆದ ವರ್ಷವೂ ದೊರೆಗೆ ಆರೋಗ್ಯ ಹದಗೆಟ್ಟಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು. ಶೇಕ್‌ ಸಬಾಹ್‌ ಅವರು 2006ರಿಂದ ಕುವೈತ್‌ ಅನ್ನು ಆಳುತ್ತಿದ್ದರು. ಆದರೆ, ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ದೇಶದ ವಿದೇಶಾಂಗ ನೀತಿಯ ಸಾರಥ್ಯ ವಹಿಸಿದ್ದರು.

ಗಲ್ಫ್ ಪ್ರಾಂತ್ಯದಲ್ಲಿ ಕುವೈತ್‌ಗೆ ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರದ ಸ್ಥಾನಮಾನ ತಂದುಕೊಡುವಲ್ಲಿ ಸಬಾಹ್‌ ಅಲ್‌ ಅಹ್ಮದ್‌ ಅಲ್‌-ಜಬರ್‌ ಅಲ್‌ ಸಬಾಹ್ ಪಾತ್ರ ಅತ್ಯಂತ ಮಹತ್ವದ್ದು ಎನ್ನಲಾಗಿದೆ.

 

Comments are closed.