ಕರಾವಳಿ

ಬ್ಯಾಂಕ್‍ಗಳು ಫಲಾನುಭವಿಗಳ ಅರ್ಜಿಗಳನ್ನು ಬಾಕಿ ಇಡದೆ ಶೀಘ್ರ ಇತ್ಯರ್ಥಗೊಳಿಸುವಂತೆ ಸೂಚನೆ

Pinterest LinkedIn Tumblr

ಮಂಗಳೂರು ಸೆಪ್ಟೆಂಬರ್ 28 : ಸರಕಾರದ ನಾನಾ ಯೋಜನೆಗಳಲ್ಲಿ ಫಲಾನುಭವಿಗಳು ಸಲ್ಲಿಸುವ ಅರ್ಜಿಗಳನ್ನು ಬ್ಯಾಂಕ್‍ಗಳು ಬಾಕಿ ಇರಿಸಿಕೊಳ್ಳದೆ ಶೀಘ್ರ ಇತ್ಯರ್ಥಗೊಳಿಸುವ ಜೊತೆಯಲ್ಲಿ ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್. ಸೆಲ್ವಮಣಿ ಸೂಚಿಸಿದರು.

ದ.ಕ. ಜಿಲ್ಲಾ ಕೆನರಾ ಬ್ಯಾಂಕ್ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಬ್ಯಾಂಕ್‍ಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆಲವೊಂದು ಬ್ಯಾಂಕ್‍ನಲ್ಲಿ ಫಲಾನುಭವಿಗಳ ಅರ್ಜಿಯನ್ನು ಇತ್ಯರ್ಥ ಪಡಿಸಿದೆ ಬಾಕಿ ಇರಿಸಿಕೊಂಡಿರುವುದು ಪರಿಶೀಲನೆ ಸಮಯದಲ್ಲಿ ಕಂಡುಬಂದಿದೆ. ಬ್ಯಾಂಕ್‍ಗಳಿಗೆ ಸಲ್ಲಿಕೆಯಾಗುವ ಅರ್ಹ ಅರ್ಜಿಗಳಿಗೆ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು. ಮಂಜೂರು ಮಾಡಲು ಸಾಧ್ಯವಾಗದ ಅರ್ಜಿಗಳನ್ನು ಬ್ಯಾಂಕಿನಲ್ಲಿ ಬಾಕಿ ಇರಿಸಿಕೊಳ್ಳದೆ ಅರ್ಜಿದಾರರಿಗೆ ಕಾರಣಗಳ ಸಹಿತ ಮಾಹಿತಿ ನೀಡಬೇಕು. ಅರ್ಜಿಗಳನ್ನು ಅದಷ್ಟು ಬೇಗನೇ ಇತ್ಯರ್ಥ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಕೋವಿಡ್-19 ಸಂದರ್ಭದಲ್ಲೂ ಕೆಲವು ಬ್ಯಾಂಕ್ ನಿಗದಿತ ಗುರಿಯನ್ನು ಹೊಂದುವಲ್ಲಿ ಯಶಸ್ವಿ ಆಗಿದೆ ಮತ್ತು ಕೆಲವು ಬ್ಯಾಂಕ್ ವಿಫಲತೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಹೊಸ ಗುರಿಯನ್ನು ತಲುಪಬೇಕು. ಎಜುಕೇಷನ್ ಲೋನ್ ಮತ್ತು ಹೌಸ್ಸಿಂಗ್ ಲೋನ್ ಹಲವು ಬ್ಯಾಂಕ್‍ಗಳಲ್ಲಿ ಉತ್ತಮ ಗುರಿ ತಲುಪುವಲ್ಲಿ ಸಾಧನೆ ತೋರಿದೆ. ಕೆಲವು ಬ್ಯಾಂಕ್‍ಗಳು ವಿಫಲಗೊಂಡಿರುತ್ತದೆ. ಕೃಷಿ ಕ್ಷೇತ್ರ, ಗೃಹಸಾಲ, ಶೈಕ್ಷಣಿಕ ಸಾಲದಲ್ಲಿ ಜಿಲ್ಲೆಯು ಉತ್ತಮ ಸಾಧನೆ ತೋರುವಲ್ಲಿ ಬ್ಯಾಂಕ್‍ಗಳು ಶ್ರಮಿಸಬೇಕು ಎಂದರು.

ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಸರ್ಕಾರದಿಂದ ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಬ್ಯಾಂಕ್ ಗಳು ಸಾಲ ನೀಡುತ್ತಿಲ್ಲವೆಂದು ಕೆಲವರು ದೂರು ನೀಡುವ ಜೊತೆ ಕನ್ನಡ ಭಾಷೆಯಲ್ಲಿ ವ್ಯವಹಾರ ನೀಡುವಂತೆ ಮನವಿಯನ್ನು ಮಾಡಿದ್ದು ಅಧಿಕಾರಿಗಳು ಅದಷ್ಟು ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಪ್ರಿಲ್ ತಿಂಗಳಿನಿಂದ ಸೆಪ್ಟೆಂಬರ್ 15 ರವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 110 ಮೀನುಗಾರರಿಗೆ ಸಾಲವನ್ನು ನೀಡಲಾಗಿದೆ. ಜಿಲ್ಲೆಯ ಯಾವುದೇ ಬ್ಯಾಂಕ್‍ಗಳು ಸಾರ್ವಜನಿಕರು ಜನ್‍ಧನ್ ಖಾತೆ ತೆರೆಯಲು ಬಯಸಿದಲ್ಲಿ ನಿರಾಕರಿಸಬಾರದು ಎಂದು ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೆನರಾ ಬ್ಯಾಂಕ್ ಎಲ್.ಡಿ.ಸಿ.ಎಮ್. ಪ್ರವೀಣ್ ಅವರು 2020-21ನೇ ಸಾಲಿನಲ್ಲಿ ಕೃಷಿವಲಯಲ್ಲಿ ಶೇ. 70.40 ಸಾಧನೆಯ ಗುರಿ ತಲುಪಿದೆ. ಎಂಎಸ್ಎಂಇ ಕ್ಷೇತ್ರದಲ್ಲಿ ಶೇ. 78.27 ಗುರಿ ಸಾಧಿಸಿದೆ. ಮುದ್ರಾ ಯೋಜನೆ ಅಡಿಯಲ್ಲಿ ಜಿಲ್ಲೆಯ ಬ್ಯಾಂಕ್‍ಗಳು ಒಟ್ಟು 3,380 ಖಾತೆಗಳಿಗೆ ಸಾಲ ವಿತರಣೆಯನ್ನು ಮಾಡಿದೆ ಎಂದು ವಿವರಿಸಿದರು.

ಸಭೆಯಲ್ಲಿ ನರ್ಬಾಡ್ ಡಿಡಿಎಂ ಸಂಗೀತಾ ಕರ್ತ, ಕೆನರಾ ಬ್ಯಾಂಕ್ ಡಿಜಿಎಂ ಸುಚಿತ್ರ ಹಾಗೂ ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು, ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು.

Comments are closed.