ಮನೋರಂಜನೆ

ನಟಿ ಶಿಲ್ಪಾ ಶೆಟ್ಟಿ ದಂಪತಿ ಮೇಲೆ ವಂಚನೆ ಆರೋಪ!

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈಗ ಅವರು ಚಿನ್ನದ ವಂಚನೆ ಆರೋಪ ಎದುರಿಸಬೇಕಿದೆ.

ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಗಂಡ ರಾಜ್ ಕುಂದ್ರಾ ನಡೆಸುತ್ತಿದ್ದಾರೆ. ಇದೊಂದು ಚಿನ್ನದ ವ್ಯಾಪಾರ ಕಂಪನಿ. ಈ ಕಂಪನಿಯಲ್ಲಿ ಎನ್‌ಆರ್‌ಐ ಮೂಲದ ಸಚಿನ್ ಜೋಶಿ ಎಂಬುವವರು 2014ರಲ್ಲಿ 18.58 ಲಕ್ಷ ಮೌಲ್ಯದ 1 ಕೆಜಿ ಬಂಗಾರ ಖರೀದಿ ಮಾಡಿದ್ದರಂತೆ. ಈ ಐದು ವರ್ಷಗಳ ಯೋಜನೆಯಡಿಯಲ್ಲಿ, ಚಿನ್ನ ಖರೀದಿ ಮಾಡಿದವರಿಗೆ ರಿಯಾಯಿತಿ ದರದಲ್ಲಿ ಚಿನ್ನದ ಕಾರ್ಡ್ ನೀಡಲಾಗುತ್ತದೆ ಮತ್ತು ಈ ಅವಧಿಯ ಕೊನೆಯಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಪುನಃ ಪಡೆದುಕೊಳ್ಳಬಹುದೆಂದು ಭರವಸೆ ಕೂಡ ನೀಡಲಾಗಿತ್ತು. ಜೋಶಿ ಅವರ ಚಿನ್ನ ಖರೀದಿ ಮಾಡಿದ ಅವಧಿ 2019ರ ಮಾರ್ಚ್ 25ಕ್ಕೆ ಮುಗಿಯುತ್ತದೆ. ಈ ಚಿನ್ನದ ಕಾರ್ಡ್ ಪಡೆಯೋಣ ಎಂದುಕೊಂಡರೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿದ್ದ ಆಫೀಸ್ ಮುಚ್ಚಿದೆ ಎಂದು ಸಚಿನ್ ಆರೋಪ ಮಾಡಿದ್ದಾರೆ.

ಇದಕ್ಕೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ‘ಸಚಿನ್ ಜೋಶಿ ಹೇಳುತ್ತಿರುವುದೆಲ್ಲವೂ ಸುಳ್ಳು, ಆಧಾರರಹಿತವಾಗಿದೆ. ಸತ್ಯುಗ್ ಕಂಪನೆಯಲ್ಲಿ ಪ್ರತಿಯೊಬ್ಬರ ಆರ್ಡರ್‌ನ್ನು ಕೂಡ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲಾಗುತ್ತದೆ. ನಾವು 1 ಕೆಜಿ ಚಿನ್ನವನ್ನು ಠೇವಣಿ ಇಟ್ಟಿದ್ದೇವೆ, ಇದಕ್ಕಾಗಿ ಸಚಿನ್ ಜೋಶಿ ಕಾನೂನುಬದ್ಧವಾಗಿ ಅನ್ವಯವಾಗುವ ಅಸ್ತವ್ಯಸ್ತದ ಶುಲ್ಕವನ್ನು ಇನ್ನೂ ಪಾವತಿಸಬೇಕಾಗಿದೆ. ಈ ವಿಷಯ ಅನೇಕರಿಗೆ ಗೊತ್ತಿಲ್ಲ. ಇದರ ಜೊತೆಗೆ ಸಚಿನ್ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ಕೂಡ ಇನ್ನು ನಡೆಯುತ್ತಿದೆ. ನಾವು ಅವರಿಗೆ ಚಿನ್ನವನ್ನು ನೀಡಲು ಬಯಸದಿದ್ದರೆ, ಚಿನ್ನವನ್ನು ಯಾಕೆ ಕೋರ್ಟ್‌ನಲ್ಲಿ ಠೇವಣಿ ಇಡ್ತೀವಿ ಎಂದು ಶಿಲ್ಪಾ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಮಧ್ಯಸ್ಥಗಾರನನ್ನು ನೇಮಿಸಿದ್ದು, ಅಲ್ಲಿ ಎಲ್ಲ ಸಾಕ್ಷಿ, ಪುರಾವೆಗಳನ್ನು ನೀಡಿದ್ದೇವೆ. ಆದಷ್ಟು ಬೇಗ ಸತ್ಯ ಹೊರಬರಲಿದೆ’ ಎಂದಿದ್ದಾರೆ.

‘ನನ್ನ ಹೆಸರು ಹಾಳು ಮಾಡುತ್ತಿರುವುದಕ್ಕೆ ಇದಕ್ಕಿಂತ ಮುನ್ನ ಕೂಡ ಪ್ರಯತ್ನಮಾಡಲಾಗಿದೆ. ಇದೇನು ಹೊಸತಾಗಿಲ್ಲ. ಸಚಿನ್ ಜೋಶಿ ಮಾಡುತ್ತಿರುವ ಆರೋಪ ಎಲ್ಲವೂ ಸುಳ್ಳು’ ಎಂದು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹೇಳಿದ್ದಾರೆ.

Comments are closed.