
ಮುಂಬೈ: ಸಂಜಯ್ ದತ್ ಮತ್ತು ಅವರ ಪತ್ನಿ ಮಾನ್ಯತಾ ದತ್ ರೊಂದಿಗೆ ಸ್ಪೆಷಲ್ ಫ್ಲೈಟ್ ಹತ್ತಿ ದುಬೈಗೆ ಹೋಗಿದ್ದಾರೆ.
ಇಷ್ಟಕ್ಕೂ ಸಂಜಯ್ ದತ್ ಅಷ್ಟೊಂದು ಆತುರವಾಗಿ ಪತ್ನಿಸಮೇತರಾಗಿ ದುಬೈಗೆ ಹೋಗಿದ್ದೇಕೆ? ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಸಂಜಯ್ ಮತ್ತು ಮಾನ್ಯತಾ ಅವರ ಅವಳಿ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ ಸದ್ಯ ದುಬೈನಲ್ಲಿದ್ದು, ಅವರನ್ನು ನೋಡುವುದಕ್ಕೆ ಹೋಗಿದ್ದಾರಂತೆ.
ಲಾಕ್ಡೌನ್ ಶುರುವಾಗುವ ಮುನ್ನ ಮಾನ್ಯತಾ ತಮ್ಮ ಮಕ್ಕಳೊಂದಿಗೆ ದುಬೈಗೆ ಹೋಗಿದ್ದರು. ಅಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಮದ ಮೂರ್ನಾಲ್ಕು ತಿಂಗಳುಗಳ ಕಾಲ ಅವರು ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗಿರಲಿಲ್ಲ. ಇನ್ನೇನು ಲಾಕ್ಡೌನ್ ಮುಗಿದು ಕುಟುಂಬ ಒಂದಾಗಬೇಕು ಎನ್ನುವಷ್ಟರಲ್ಲಿ ಸಂಜಯ್ ದತ್ಗೆ ಕ್ಯಾನ್ಸರ್ ಇರುವುದು ಜಗಜ್ಜಾಹೀರಾಯಿತು.
ಈ ವಿಷಯ ಕೇಳಿ ಗಾಬರಿಯಾದ ಮಾನ್ಯತಾ, ಮಕ್ಕಳನ್ನು ದುಬೈನಲ್ಲೇ ಬಿಟ್ಟು, ಮುಂಬೈಗೆ ಬಂದಿದ್ದರು. ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವ ಸಂಜಯ್ ದತ್, ಹೆಚ್ಚಿನ ಚಿಕಿತ್ಸೆಗಾಗಿ ಮುಂದಿನ ತಿಂಗಳು ಅಮೆರಿಕಾಗೆ ಹೋಗುತ್ತಿರುವ ಸುದ್ದಿ ಇದೆ. ಈ ಮಧ್ಯೆ, ಬಾಕಿ ಇರುವ ಕೆಲಸ ಮುಗಿಸಿಕೊಳ್ಳುತ್ತಿರುವ ಸಂಜಯ್, ಇತ್ತೀಚೆಗೆ ‘ಶಂಶೇರಾ’ ಚಿತ್ರದ ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ.
ಹೀಗಿರುವಾಗಲೇ ಮಕ್ಕಳನ್ನು ನೋಡುವ ಬಯಕೆಯಿಂದ ಸಂಜಯ್, ಇದೀಗ ದುಬೈಗೆ ಹೋಗಿದ್ದಾರೆ. ಮಕ್ಕಳೊಂದಿಗೆ 10 ದಿನಗಳ ಕಾಲ ಕಳೆದು ಭಾರತಕ್ಕೆ ಮರಳಲಿದ್ದಾರೆ. ಆ ನಂತರ ಅವರು ಅಮೆರಿಕಾಗೆ ಹೆಚ್ಚಿನ ಚಿಕಿತ್ಸೆಗೆ ಹೋಗುವ ಸಾಧ್ಯತೆ ಇದೆ.
Comments are closed.