ಮನೋರಂಜನೆ

ಡ್ರಗ್ಸ್​ ಜಾಲದೊಂದಿಗೆ ನಂಟು; ನಟಿ ರಾಗಿಣಿ ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಸಂಬಂಧ ನ್ಯಾಯಾಲಯ ನಟಿ ರಾಗಿಣಿಯನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ಡ್ರಗ್ಸ್​ ಜಾಲದೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿ ಅವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಇಂದು ಸಿಸಿಬಿ ಪೊಲೀಸರು ಒಂದನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಎರಡು ದಿನಗಳಿಂದ ರಾಗಿಣಿ ವಿಚಾರಣೆ ವೇಳೆ ಯಾವುದೇ ಮಾಹಿತಿಯನ್ನೂ ನೀಡದ ಕಾರಣ ಇನ್ನೂ 10 ದಿನ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಆದರೆ, ಇನ್ನು 5 ದಿನಗಳ ಕಾಲ ಸಿಸಿಬಿ ವಶಕ್ಕೆ ರಾಗಿಣಿಯನ್ನು ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಇನ್ನು 5 ದಿನಗಳು ರಾಗಿಣಿ ದ್ವಿವೇದಿ ಸಿಸಿಬಿ ಅಧಿಕಾರಿಗಳ ವಶದಲ್ಲಿರಲಿದ್ದಾರೆ.

ಎರಡು ದಿನಗಳ ಹಿಂದೆ ನಟಿ ರಾಗಿಣಿ ದ್ವಿವೇದಿ ಅವರ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಮನೆಯನ್ನು ತಪಾಸಣೆ ಮಾಡಿದ ಬಳಿಕ ರಾಗಿಣಿಯನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದ ರಾಗಿಣಿ ಸಿ​ಸಿಬಿ ಪೊಲೀಸರ ಯಾವ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಇದರ ನಡುವೆ ಅನಾರೋಗ್ಯದ ನೆಪವೊಡ್ಡಿ ವಿಚಾರಣೆಯಿಂದಲೂ ತಪ್ಪಿಸಿಕೊಂಡಿದ್ದರು. ಸಿಸಿಬಿ ತನಿಖಾಧಿಕಾರಿಗಳ ಮುಂದೆ ಡ್ರಗ್ಸ್ ಕುರಿತಾಗಿ ಯಾವ ವಿಚಾರವನ್ನೂ ಬಾಯಿ ಬಿಟ್ಟಿಲ್ಲ. ತನಿಖಾಧಿಕಾರಿಗಳಿಗೆ ಸಹಕಾರ ನೀಡದೆ ಅಸ್ಪಷ್ಟವಾಗಿ ಉತ್ತರ ನೀಡಿದ್ದರು. ಇಂದು ಪೊಲೀಸ್ ಕಸ್ಟಡಿ ಅಂತ್ಯವಾಗುವುದರಿಂದ ಇಂದು ತನಿಖಾಧಿಕಾರಿ ರಾಗಿಣಿಯನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಒಂದನೇ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶ ಜಗದೀಶ್​ ರಾಗಿಣಿಯನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ವಶಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.

ಸಿಸಿಬಿ ಪೊಲೀಸರು ರಾಗಿಣಿಯ ಆಪ್ತ ಡ್ರಗ್ ಪೆಡ್ಲರ್ ರವಿಶಂಕರ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಆಗ ಆತ ರಾಗಿಣಿಯ ಹೆಸರನ್ನೂ ಹೇಳಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಬಳಿಕ ಆಕೆಯನ್ನು ಬಂಧಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಿ ಮೂರು ದಿನಗಳ ಕಾಲ ವಿಚಾರಣೆಗಾಗಿ ಪೊಲೀಸರ ವಶಕ್ಕೆ ಪಡೆಯಲಾಗಿತ್ತು. ಆದರೆ, ಪೊಲೀಸರು ವಶಕ್ಕೆ ಪಡೆದು ಎರಡು ದಿನಗಳಾದರೂ ಸಹ ವಿಚಾರಣೆ ವೇಳೆ ನಟಿ ರಾಗಿಣಿ ತುಟಿ ಬಿಚ್ಚಿರಲಿಲ್ಲ.

ವಿಚಾರಣೆ ವೇಳೆ ಪ್ರಕರಣದಲ್ಲಿ ಬಂಧಿತರಾಗಿರುವ ರವಿಶಂಕರ್, ರಾಹುಲ್, ಪ್ರಶಾಂತ್ ರಾಂಕಾ, ಲೂಮ್ ಪೆಪ್ಪರ್ ಸೈಮನ್ ಇವರುಗಳ ಸಂಪರ್ಕದ ಬಗ್ಗೆಯೂ ಹಲವು ಪ್ರಶ್ನೆಗಳನ್ನು ಮುಂದಿಡಲಾಗಿತ್ತು. ಇಷ್ಟಕ್ಕೂ ಈ ಎಲ್ಲರನ್ನೂ ನಟಿ ರಾಗಿಣಿ ಭೇಟಿಯಾಗಿರುವುದಕ್ಕೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡೇ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಆದರೆ, “ಪಾರ್ಟಿ ಸಮಯದಲ್ಲಿ ಭೇಟಿಯಾಗಿರಬಹುದು ನನಗೆ ನೆನಪಿಲ್ಲ” ಎಂದು ರಾಗಿಣಿ ಹಾರಿಕೆಯ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

Comments are closed.