ಕುಂದಾಪುರ: ಲಾರಿಯೊಂದರಲ್ಲಿ ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಕೋಣಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ನಾಲ್ವರು ಆರೋಪಿಗಳು ಹಾಗೂ ಲಾರಿ ವಶಕ್ಕೆ ಪಡೆದು 30 ಕೋಣಗಳನ್ನು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಶನಿವಾರ ನಡೆದಿದೆ.


ಹರಿಯಾಣ ಪಾತೆಬಾದ್ ಜಿಲ್ಲೆಯ ಮಂಜಿತ್ ಸಿಂಗ್ ಪ್ರಾಯ (38), ರಾಜಸ್ಥಾನ ಮೂಲದ ಪವಾನ್ ಕುಮಾರ್ (32), ಉತ್ತರ ಪ್ರದೇಶ ಮೂಲದ ಗುಲ್ವಾಂ(29) ಹರಿಯಾಣ ಮೂಲದ ರವಿಕುಮಾರ್(25) ಬಂಧಿತ ಆರೋಪಿಗಳು.
ಅಮಾಸೆಬೈಲು ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿಗಳು ಹೊಸಂಗಡಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಶನಿವಾರ ಬೆಳಿಗ್ಗೆ ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ HR 61 B 3727 ನೇ ಲಾರಿಯೊಂದು ಬಂದಿದ್ದು ಲಾರಿಯ ಚಾಲಕನಿಗೆ ನಿಲ್ಲಿಸುವಂತೆ ಸೂಚನೆ ನೀಡಿದಾಗ ಆತ ಲಾರಿ ನಿಲ್ಲಿಸಿದ್ದು ವಾಹನವನ್ನು ತಪಾಸಣೆ ಮಾಡಿದಾಗ ವಾಹನದ ಹಿಂದುಗಡೆ ಟರ್ಪಾಲು ಮುಚ್ಚಿದ ಬಾಡಿಯಲ್ಲಿ ಸುಮಾರು 30 ಕೋಣಗಳಿದ್ದಿತ್ತು. ಆ ಕೋಣಗಳಿಗೆ ಯಾವುದೇ ಮೇವು, ಆಹಾರ ನೀಡದೆ ಒಂದಕ್ಕೊಂದು ತಾಗಿಕೊಂಡು ಮಿಸುಕಾಡದಂತೆ ಹಿಂಸ್ಮಾತಕವಾಗಿ ಕಟ್ಟಿ ಹಾಕಿ ತುಂಬಲಾಗಿತ್ತು. ಅದೇ ಲಾರಿಯಲ್ಲಿ ನಾಲ್ವರು ಆರೋಪಿಗಳು ಇದ್ದು ಈ ಕೋಣಗಳ ಬಗ್ಗೆ ವಿಚಾರಿಸಿದಾಗ ಕೋಣಗಳನ್ನು ಸಾಗಾಟ ಮಾಡಲು ಯಾವುದೇ ಪರವಾನಿಗೆಯಿಲ್ಲ ಎಂದು ತಿಳಿಸಿದ್ದಾರೆ. ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಹಿಂಸ್ಮಾತಕವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಕಂಡುಬಂದಿರುವುದರಿಂದ 30 ಕೋಣಗಳನ್ನು ಹಾಗೂ ಲಾರಿಯನ್ನು ಮತ್ತು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.