
ನವದೆಹಲಿ: ತಾಯಿಗೆ ಮಕ್ಕಳ ಮೇಲೆ ಪ್ರೀತಿ ಇರುವುದು ಸಹಜ. ಆದರೆ ಈ ತಾಯಿ ಇನ್ನೊಬ್ಬ ಅಮ್ಮನನ್ನು ಸಂಕಟಕ್ಕೆ ದೂಡಿ, ತನ್ನ ಮಗಳ ನೋವು ಉಪಶಮನ ಮಾಡಲು ಮುಂದಾಗಿದ್ದಾರೆ. ಪರಿಣಾಮ ಜೈಲು ಸೇರಿದ್ದಾರೆ.
ಬಂಧಿತ 58 ವರ್ಷದ ಮಹಿಳೆ, ತನ್ನ ಮಗಳಿಗೆ ನೀಡಲೆಂದು ಮತ್ತೊರ್ವ ಮಹಿಳೆಯ 25 ದಿನಗಳ ಮಗುವನ್ನು ಕದ್ದಿದ್ದಾರೆ. ಆ ಮಹಿಳೆಗೆ ಹೆರಿಗೆಯಾಗಿ 25 ದಿನಗಳಷ್ಟೇ ಕಳೆದಿತ್ತು. ಉತ್ತರ ದೆಹಲಿಯ ಲಾಹೋರಿ ಗೇಟ್ ಬಳಿ ರಸ್ತೆ ಪಕ್ಕ ಮಹಿಳೆ ತನ್ನ ಪುಟ್ಟ ಗಂಡು ಮಗುವಿನೊಂದಿಗೆ ಮಲಗಿದ್ದರು. ಸೋಮವಾರದಿಂದ ಮಗು ಕಾಣೆಯಾಗಿತ್ತು. ಅಂದೇ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಗೊಲೆ ಹಟ್ಟಿ ಬಳಿ ಫೂಟ್ಪಾತ್ನಲ್ಲಿ ನಾನು ನನ್ನ ಇಬ್ಬರು ಮಕ್ಕಳೊಂದಿಗೆ ರಾತ್ರಿ ಮಲಗಿದ್ದೆ. ಒಬ್ಬನಿಗೆ 5ವರ್ಷ. ಇನ್ನೋರ್ವನಿಗೆ ಕೇವಲ 25 ದಿನ. ಬೆಳಗ್ಗೆ 4ಗಂಟೆಗೆ ಎಚ್ಚರವಾದಾಗ ಮಗು ಇರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು.
ಆ ಸ್ಥಳದಲ್ಲಿ ಇದ್ದ ಸಿಸಿಟಿವಿ ಫೂಟೇಜ್ ನೋಡಿದಾಗ ಮಹಿಳೆಯೋರ್ವಳು ಮಗುವನ್ನು ಕದ್ದಿದ್ದು ಕಂಡುಬಂತು. ಆರೋಪಿ ಮಹಿಳೆ ಖಾರಿ ಬಾವೋಲಿ ಬಳಿ ಒಂದು ಅಂಗಡಿಯಿಟ್ಟುಕೊಂಡಿದ್ದಾರೆ. ಅವರನ್ನು ಬಂಧಿಸಿ, ಮಗುವನ್ನು ಅದರ ತಾಯಿಗೆ ವಾಪಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
58 ವರ್ಷದ ಮಹಿಳೆಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರಿಗೂ ವಿವಾಹವಾಗಿದೆ. ಅದರಲ್ಲಿ ಓರ್ವ ಮಗಳಿಗೆ ಮದುವೆಯಾಗಿ ಕೆಲವು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಈ ಮಹಿಳೆ ತನ್ನ ಮಗುವಿನೊಂದಿಗೆ ರಸ್ತೆ ಪಕ್ಕ ಮಲಗುವುದನ್ನು ಗಮನಿಸಿದ್ದ ಆಕೆ, ಸಮಯ ನೋಡಿ ಎತ್ತುಕೊಂಡು ಹೋಗಿದ್ದರು.
Comments are closed.