
ಮಂಗಳೂರು: ‘ತೌಳವ ಸಂಸ್ಕೃತಿಯು ಕರಾವಳಿ ಭಾಗದ ವಿಶಿಷ್ಟ ಪರಂಪರೆಯಿಂದ ಬೆಳೆದು ಬಂದಿದೆ. ಈ ಸಂಸ್ಕೃತಿಗೆ ಹಲವು ಆಯಾಮಗಳಿವೆ. ಭಾಷೆ-ಸಾಹಿತ್ಯ, ಜನಪದ ನಂಬಿಕೆ, ಆರಾಧನೆ – ಆಚರಣೆಗಳ ಮೂಲಕ ಅದು ವ್ಯಕ್ತವಾಗುವುದಲ್ಲದೆ ವಿವಿಧ ಕಲಾಪ್ರಕಾರಗಳ ರೂಪದಲ್ಲಿ ದೇಶ-ವಿದೇಶಗಳಲ್ಲಿ ಪರಿಚಿತವಾಗಿದೆ’ ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಶಕ್ತಿನಗರದ ತುಳುವೆರೆ ಕೂಟ ಚಾವಡಿಯಲ್ಲಿ ಶನಿವಾರ ಜರಗಿದ ತುಳುನಾಡ ತುಡರ್ ಸಂಘಟನೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ‘ಹೊಸ ಸಂಘ – ಸಂಸ್ಥೆಗಳನ್ನು ಕಟ್ಟಿ ತುಳು ಸಂಸ್ಕೃತಿಯ ದೀಪ ಹಚ್ಚುವುದು ದೊಡ್ಡದಲ್ಲ; ಆದರೆ ಅದು ಆರದಂತೆ ಕಲಾಸಕ್ತರು ಮತ್ತು ಸಂಸ್ಕೃತಿ ಪ್ರಿಯರ ಪ್ರೋತ್ಸಾಹದ ಎಣ್ಣೆ ಅನವರತ ಹರಿದು ಬರಬೇಕು’ ಎಂದವರು ನುಡಿದರು.

ಯುವ ಜನರು ವೇಷ ಕಟ್ಟದಿರಿ: ಕತ್ತಲ್ ಸಾರ್:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ‘ಎಳೆಯರೆಲ್ಲಾ ಸೇರಿ ಹುಮ್ಮಸ್ಸಿನಿಂದ ಪ್ರಾರಂಭಿಸಿರುವ ತುಳು ಸಂಘಟನೆಗೆ ಹಿರಿಯರು ಬೆಂಗಾವಲಾಗಿ ನಿಂತಿರುವುದು ಸ್ವಾಗತಾರ್ಹ. ತುಳುನಾಡಿನ ಜೀವನಶೈಲಿ ಮತ್ತು ಉಡುಗೆ-ತೊಡುಗೆಗಳಲ್ಲಿ ನೆಲದ ಸಂಸ್ಕೃತಿಯ ಸ್ಪರ್ಶವಿದೆ. ಯುವಜನಾಂಗ ಅದನ್ನು ವಿರೂಪಗೊಳಿಸಿ ಏನೇನೊ ವೇಷ ಕಟ್ಟಿ ಮೆರೆಯಬಾರದು’ ಎಂದರು.
ಯಕ್ಷ ಶಿಕ್ಷಕ ರಾಕೇಶ್ ರೈ ಅಡ್ಕ, ರಂಗಭೂಮಿ ಕಲಾವಿದ ನಾಗೇಶ್ ಸಾಲಿಯಾನ್ ಗರೋಡಿ, ತುಳುವೆರೆ ಕೂಟದ ಅಧ್ಯಕ್ಷ ವಿಶ್ವನಾಥ ಶಕ್ತಿನಗರ ಅತಿಥಿಗಳಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ದೀರ್ಘ ತುಳು ಕವಿತೆ ರಚಿಸಿ ದಾಖಲೆ ನಿರ್ಮಿಸಿದ ಇಂಜಿನೀಯರಿಂಗ್ ವಿದ್ಯಾರ್ಥಿ ಪ್ರಾಣೇಶ್ ನನ್ನು ಸನ್ಮಾನಿಸಲಾಯಿತು
ತುಳುನಾಡ ತುಡರ್ ಬಳಗದ ಹರ್ಷಿತ್ ಎಸ್.ಕೊಟ್ಟಾರಿ ಸ್ವಾಗತಿಸಿದರು. ನಯನ ಕೋಟ್ಯಾನ್ ಪ್ರಸ್ತಾವನೆ ಗೈದರು. ರಾಧಾಕೃಷ್ಣ ರೈ ನುಳಿಯಾಲು ಕಾರ್ಯಕ್ರಮ ಸಂಯೋಜಿಸಿದ್ದರು. ರವೀಂದ್ರನಾಥ ಶೆಟ್ಟಿ ನಿರೂಪಿಸಿ, ದೀಕ್ಷಿತ ಕೋಟ್ಯಾನ್ ವಂದಿಸಿದರು.
Comments are closed.