
ನವದೆಹಲಿ: ದಾಖಲೆ ಪ್ರಮಾಣದಲ್ಲಿ ನಡೆಯುತ್ತಿರುವ ಪರೀಕ್ಷೆ ಹಾಗೂ ಜನಜೀವನ ಸಹಜ ಸ್ಥಿತಿಯತ್ತ ದಾಪುಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದೇಶದಲ್ಲಿ ಹೊಸ ದಾಖಲೆಯತ್ತ ಸಾಗುತ್ತಿದೆ. ಸೋಮವಾರ ಒಂದೇ ದಿನ ದೇಶದಲ್ಲಿ ಬರೋಬ್ಬರಿ 78,512 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಸೋಮವಾರ 78,512 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 36,21,246ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ಒಂದೇ ದಿನ 971 ಮಂದಿ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ. ಮೃತರ ಸಂಖ್ಯೆ 64,469ಕ್ಕೆ ಹೆಚ್ಚಳವಾಗಿದೆ.
ಇನ್ನು 36,21,246 ಮಂದಿ ಸೋಂಕಿತರ ಪೈಕಿ 27,74,802 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿ ಇನ್ನೂ 7,81,975 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಕೂಡ ದೇಶದಲ್ಲಿ ಅತ್ಯಧಿಕ ದೈನಂದಿನ ಕೊರೋನಾ ಸೋಂಕು ಸಂಖ್ಯೆ ದಾಖಲಾಗಿತ್ತು. ಭಾನುವಾರ ಒಂದೇ ದಿನ ದಾಖಲೆಯ 78,761 ಪ್ರಕರಣ ದಾಖಲಾಗಿತ್ತು. ಇಂದೂ ಕೂಡ 78,512 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖಅಯೆ ಹೆಚ್ಚಾಗಲು ಪ್ರಮುಖವಾಗಿ ಮೂರು ಕಾರಣಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ.
ಕೊರೋನಾ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡಿದ್ದು, ದೇಶ ಆರ್ಥಿಕತೆಗೆ ತೆರೆದುಕೊಂಡಿದ್ದು, ಮತ್ತು ಕೊರೋನಾದ ಬಗ್ಗೆ ಜನರಲ್ಲಿ ಇದ್ದ ಭಯ ಕಡಿಮೆ ಆಗಿದ್ದರಿಂದ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರುಗತೆ ದಾಖಲಾಗುತ್ತಿದೆ.
ಜನರಿಗೆ ಕೊರೋನಾದ ಬಗ್ಗೆ ಇದ್ದ ಭಯ ಕಡಿಮೆಯಾಗಿದೆ. ಮಾಸ್ಕ್, ಧರಿಸುವಿಕೆ. ಕೈಗಳ ಶುಚಿತ್ವವನ್ನು ಪಾಲನೆ ಮಾಡದಿರುವುದು. ಇದು ಕೂಡ ಕೊರೋನಾ ವೈರಸ್ ಹರಡಲು ಕಾರಣವಾಗುತ್ತಿದೆ ಎಂದು ವೈರಾಣು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈಗಾಗಲೇ ಕೊರೋನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವುದರಿಂದ ಈ ಹಂತದಲ್ಲಿ ಸೋಂಕಿನ ಕಡಿವಾಣಕ್ಕೆ ಸರ್ಕಾರದ ಪ್ರಯತ್ನ ಫಲ ನೀಡಲಾರದು ಎಂದು ತಜ್ಞರು ತಿಳಿಸಿದ್ದಾರೆ.
Comments are closed.