
ನೆಲಮಂಗಲ: ಮಗಳು ಬೇರೆ ಜಾತಿ ಯುವಕನನ್ನು ವಿವಾಹವಾದಳು ಎಂಬ ಕಾರಣಕ್ಕೆ ಮನನೊಂದ ದಂಪತಿ ಶುಕ್ರವಾರ ಸಂಪ್ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ದುರಂತ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಹ್ಯಾರೋಕೇತನಹಳ್ಳಿಯಲ್ಲಿ ಗ್ರಾಮದ ನಿವಾಸಿ ಶಿವಲಿಂಗಪ್ಪ (51) ಚಂದ್ರಕಲಾ (45) ಮೃತರು. ಮೂಲತಃ ಹಾಸನ ಜಿಲ್ಲೆಯ ಹಾರನಹಳ್ಳಿಯವರಾದ ದಂಪತಿಯ ಹಿರಿಯ ಪುತ್ರಿ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ದಾವಣಗೆರೆ ಮೂಲದ ಯುವಕನನ್ನು ಪ್ರೀತಿಸಿದ್ದಳು. ವಿಚಾರ ತಿಳಿದ ಪಾಲಕರು ಇಬ್ಬರಿಗೂ ಬುದ್ದಿ ಹೇಳಿದ್ದರು.
5 ತಿಂಗಳು ಮನೆಯಲ್ಲಿಯೇ ಇದ್ದ ಯುವತಿ ಕೆಲ ದಿನಗಳಿಂದ ಮತ್ತೆ ಕೆಲಸಕ್ಕೆ ಹೋಗುತ್ತಿದ್ದಳು. ಪಾಲಕರು ಮಗಳಿಗೆ ವರನ ಅನ್ವೇಷಣೆಯಲ್ಲಿ ತೊಡಗಿದ್ದರು. ಆದರೆ ಗುರುವಾರ ಕೆಲಸಕ್ಕೆ ಹೋದವಳು ಮನೆಗೆ ಬಾರದೆ ಪ್ರೀತಿಸುತ್ತಿದ್ದ ಯುವಕನನ್ನೇ ವಿವಾಹವಾಗಿರುವುದಾಗಿ ತಿಳಿಸಿದ್ದಾಳೆ. ವಿಚಾರ ತಿಳಿದ ದಂಪತಿ ಕಿರಿಯ ಪುತ್ರಿ ಮಲಗಿದ ನಂತರ ಡೆತ್ನೋಟ್ನಲ್ಲಿ ನಮ್ಮ ಸಾವಿಗೆ ನಾವೇ ಕಾರಣ, ತಾವು ಇಬ್ಬರಿಗೆ ಕೊಡಬೇಕಿರುವ 7 ಸಾವಿರ ರೂ. ಸಾಲ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹಣ ಹಾಗೂ ಎಟಿಎಂ ಪಿನ್ ಸಂಖ್ಯೆ ಬರೆದಿಟ್ಟು ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.