ಮನೋರಂಜನೆ

ಯಾರಾದರೂ ಶೂಟ್ ಮಾಡಿ ನನ್ನನ್ನು ಸಾಯಿಸಿ ಬಿಡಿ!; ರಿಯಾ ಚಕ್ರವರ್ತಿ

Pinterest LinkedIn Tumblr


ಎರಡೂವರೆ ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ನಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತನನ್ನು ಆತನ ಪ್ರೇಯಸಿ ರಿಯಾ ಚಕ್ರವರ್ತಿಯೇ ವಿಷ ಹಾಕಿ ಕೊಲೆ ಮಾಡಿದ್ದಾಳೆ ಎಂದು ನಿನ್ನೆ ಸುಶಾಂತ್ ಸಿಂಗ್ ಅವರ ತಂದೆ ಕೆಕೆ ಸಿಂಗ್ ಗಂಭೀರ ಆರೋಪ ಮಾಡಿದ್ದರು. ಈ ರೀತಿಯ ಆರೋಪದಿಂದ ಬಹಳ ನೋವಾಗಿದೆ. ನಾನು ಮತ್ತು ನಮ್ಮ ಮನೆಯವರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದೇವೆ. ಅಥವಾ ನೀವೇ ಯಾರಾದರೂ ಶೂಟ್ ಮಾಡಿ ನಮ್ಮನ್ನು ಕೊಂದು ಬಿಡಿ ಎಂದು ರಿಯಾ ಚಕ್ರವರ್ತಿ ನೋವಿನ ನುಡಿಗಳನ್ನಾಡಿದ್ದಾರೆ.

ನಿನ್ನೆ ವಿಡಿಯೋ ಬಿಡುಗಡೆ ಮಾಡಿದ್ದ ಕೆ.ಕೆ. ಸಿಂಗ್, ಸುಶಾಂತ್​ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಆತನ ಜೀವ ತೆಗೆಯಲೆಂದೇ ವಿಷ ಹಾಕಿದ್ದಾಳೆ. ಆಕೆಯೇ ನನ್ನ ಮಗನ ಕೊಲೆಗಾರ್ತಿ ಎಂದು ಅವರು ಆರೋಪಿಸಿದ್ದಾರೆ. ಬಹಳ ಸಮಯದಿಂದ ಸುಶಾಂತ್​ಗೆ ಗೊತ್ತಾಗದ ಹಾಗೆ ರಿಯಾ ಆತನಿಗೆ ವಿಷವುಣಿಸುತ್ತಿದ್ದಳು. ಆಕೆಯೇ ನನ್ನ ಮಗನ ಕೊಲೆ ಮಾಡಿದಾಕೆ. ತನಿಖಾ ತಂಡ ಆಕೆಯನ್ನು ಮತ್ತು ಆಕೆಗೆ ಸಹಾಯ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.

ಕಳೆದೊಂದು ತಿಂಗಳಿನಿಂದ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಹೊಸ ತಿರುವುಗಳು ಉಂಟಾಗುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹಾಗೇ, ಆಕೆಯನ್ನು ಬಂಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೂ ಶುರುವಾಗಿವೆ. ಇದರಿಂದ ತಮ್ಮ ಕುಟುಂಬಕ್ಕೆ ತಲೆಯೆತ್ತಿ ಓಡಾಡದಂತಹ ಪರಿಸ್ಥಿತಿ ಎದುರಾಗಿದ್ದು, ಕುಟುಂಬದ ಮರ್ಯಾದೆ ಬೀದಿಗೆ ಬಂದಿದೆ ಎಂದು ರಿಯಾ ಚಕ್ರವರ್ತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಸಾವಿನಿಂದ ನನಗೂ ನೋವಾಗಿದೆ. ಆದರೆ, ಈ ಪ್ರಕರಣಕ್ಕೂ, ನನಗೂ ಸಂಬಂಧ ಕಲ್ಪಿಸಿರುವುದರಿಂದ ನಾನು ಹಾಗೂ ನಮ್ಮ ಮನೆಯವರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯೋಚನೆಯೂ ಬಂದಿತ್ತು. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ನಮಗೆ ಮರ್ಯಾದೆಯೇ ಬಹಳ ಮುಖ್ಯ. ಸಮಾಜದಲ್ಲಿ ತಲೆಯೆತ್ತಿ ನಡೆಯಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿರುವುದರಿಂದ ಹಲವು ಬಾರಿ ಸಾಯುವ ಯೋಚನೆಯೂ ಬಂದಿತ್ತು ಎಂದು ಆಜ್​ತಕ್ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ರಿಯಾ ಚಕ್ರವರ್ತಿ ಹೇಳಿದ್ದಾಳೆ.

ನಾನು ಕೆಲವು ದಿನಗಳಿಂದ ಅಧಿಕ ಒತ್ತಡದಿಂದ ಬಳಲುತ್ತಿದ್ದೇನೆ. ಕೆಲವು ತಿಂಗಳಿಂದ ನಾನು ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ. ಹೀಗೆ ಪ್ರತಿದಿನ ಆರೋಪಗಳನ್ನು ಮಾಡಿ, ಹಿಂಸೆ ನೀಡುವ ಬದಲು ನನ್ನನ್ನು, ನನ್ನ ಫ್ಯಾಮಿಲಿಯನ್ನು ಯಾರಾದರೂ ಶೂಟ್ ಮಾಡಿ ಸಾಯಿಸಿಬಿಡಿ. ನಮಗೆ ಎಲ್ಲದಕ್ಕಿಂತಲೂ ಮರ್ಯಾದೆಯೇ ಮುಖ್ಯ ಪ್ರತಿಯೊಬ್ಬರೂ ಹೊಸ ಹೊಸ ಕಥೆ ಕಟ್ಟಿ ನಮ್ಮನ್ನು ಇಂಚಿಂಚಾಗಿ ಕೊಲ್ಲುತ್ತಿದ್ದಾರೆ ಎಂದು ರಿಯಾ ಚಕ್ರವರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಮಾಟ-ಮಂತ್ರ ಮಾಡಿಸಿ ಸುಶಾಂತ್​ನನ್ನು ಕೊಂದಿದ್ದೇನೆ, ನಾನು ವಿಷ ಕನ್ಯೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ನಾನು ಸುಶಾಂತ್​ನನ್ನು ಪ್ರೀತಿಸಿದಾಕೆ. ಆತನ ಸಾವಿಗೆ ನ್ಯಾಯ ಸಿಗಬೇಕೆಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಈಗ ನನಗೂ ನ್ಯಾಯ ಸಿಗಬೇಕೆಂದು ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ನೋವೇನೆಂಬುದು ಯಾರಿಗೂ ಅರ್ಥವಾಗುವುದಿಲ್ಲ. ನಮ್ಮನ್ನು ಯಾಕೆ ಎಲ್ಲರೂ ಅಪರಾಧಿಗಳಂತೆ ನೋಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ.ಸುಶಾಂತ್​ ಸಿಂಗ್ ಸಾವಿನ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಒತ್ತಾಯಿಸಿ ಕೆಕೆ ಸಿಂಗ್ ಬಿಹಾರದಲ್ಲಿ ಕೇಸ್ ದಾಖಲಿಸಿದ್ದರು. ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದವರ ಮೇಲೆ ಕೆಕೆ ಸಿಂಗ್ ದೂರು ನೀಡಿದ್ದರು. ಇದೀಗ ಸಿಬಿಐ, ಎನ್​ಸಿಬಿ ಮತ್ತು ಇಡಿಯಿಂದ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ.

ರಿಯಾ ವಿರುದ್ಧ ಕ್ರಿಮಿನಲ್ ಕೇಸ್:

ದೊಡ್ಡ ಮೊತ್ತದ ಹಣ ಸುಶಾಂತ್​ ಖಾತಯಿಂದ ರಿಯಾ ಖಾತೆಗೆ ವರ್ಗಾವಣೆ ಆಗಿದೆ ಎಂದು ಸುಶಾಂತ್​ ತಂದೆ ದೂರಿದ್ದರು. ಈ ದೂರಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದೂರು ದಾಖಲು ಮಾಡಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ರಿಯಾ ಹಾಗೂ ಅವರ ಕುಟುಂಬವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೆಲ ವಾಟ್ಸ್​​ಆಪ್ ಮೆಸೇಜ್​ಗಳನ್ನು ಡಿಲೀಟ್​ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದು ಡ್ರಗ್​ ಡೀಲರ್​ಗಳಿಗೆ ಕಳುಹಿಸಲಾದ ಮೆಸೇಜ್​ ಎಂದು ಹೇಳಲಾಗಿದೆ. ಹೀಗಾಗಿ, ಈ ಬಗ್ಗೆ ವಿಚಾರಣೆ ನಡೆಸುವಂತೆ ಇಡಿ ಮಾದಕವಸ್ತು ನಿಯಂತ್ರಣ ದಳಕ್ಕೆ (ಎನ್​ಸಿಬಿ) ಪತ್ರ ಬರೆದಿತ್ತು. ಅಧಿಕೃತವಾಗಿ ಪತ್ರ ದೊರೆತ ನಂತರದಲ್ಲಿ ರಿಯಾ ವಿರುದ್ಧ ಎನ್​ಸಿಬಿ ಕ್ರಿಮಿನಲ್​ ಪ್ರಕರಣ ದಾಖಲು ಮಾಡಿಕೊಂಡಿದೆ.

34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದರು. ಮಾನಸಿಕ ಖಿನ್ನತೆಯಿಂದ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಸುಶಾಂತ್ ಸಿಂಗ್ ರಜಪೂತ್ ತಂದೆ, ತಮ್ಮ ಮಗನದ್ದು ಆತ್ಮಹತ್ಯೆಯಲ್ಲ, ಯಾರೋ ಆತನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಬಳಿಕ ಸುಶಾಂತ್ ಸಾವಿನ ಪ್ರಕರಣಕ್ಕೆ ಹೊಸ ತಿರುವುಗಳು ಸಿಗುತ್ತಿವೆ.

Comments are closed.