
ಮಂಗಳೂರು : ಇತ್ತೀಚೆಗೆ ನಿಧನರಾದ ಶಿಕ್ಷಣ ಮತ್ತು ಯಕ್ಷಗಾನ ಸಾಹಿತ್ಯ ಕ್ಷೇತ್ರಗಳಿಗೆ ತಪಸ್ಸಿನಂತೆ ಸೇವೆಗೈದು ತಮ್ಮನ್ನು ಮುಡಿಪಾಗಿರಿಸಿದ ಇಬ್ಬರೂ ಶ್ರೇಷ್ಠ ಸಾಧಕರುಗಳಾದ ಸೀಮಂತೂರು ನಾರಾಯಣ ಶೆಟ್ಟಿ ಹಾಗೂ ಉಳುವಾನ ಗಂಗಾಧರ ಭಟ್ಟರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನುಡಿ ನಮನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿನಮನ ಸಲ್ಲಿಸುತ್ತಾ ಡಾ| ಎನ್ ನಾರಾಯಣ ಶೆಟ್ಟರು ಹಳೆಗನ್ನಡ ಕಾವ್ಯಪರಂಪರೆಯ ಛಂದಸ್ಸು ಹಾಗೂ ವ್ಯಾಕರಣ ಪಂಡಿತರಾಗಿ ಛಂದೋ ಬ್ರಹ್ಮರೆಂದೇ ಖ್ಯಾತರಾಗಿದ್ದರು.
ಉಪ್ಪಿನಂಗಡಿಯಲ್ಲಿ ಜರಗಿದ್ದ 18ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮರ್ಥವಾಗಿ ಸಮ್ಮೇಳಾನಾಧ್ಯಕ್ಷ ಸ್ಥಾನವನ್ನು ನಿರ್ವಹಿಸಿರುವ ಅವರ ಅಗಲಿಕೆಯಿಂದ ಹಳೆ ತಲೆಮಾರಿನ ಕಾವ್ಯಪರಂಪರೆ ಯ ಕೊಂಡಿಯೊಂದು ಕಳಚಿದಂತಾಗಿದೆ.
ದಿವಂಗತ ಉಳುವಾನ ಗಂಗಾಧರ ಭಟ್ಟರು ತನ್ನ ಸರ್ವಸ್ವವನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಮೀಸಲಿರಿಸಿದ ಓರ್ವ ಮಹಾನ್ ತಪಸ್ವಿ, ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಅನೇಕ ವರ್ಷಗಳ ಕಾಲ ಮುನ್ನಡೆಸಿ ಆದರ್ಶಮಯ ವಿದ್ಯಾಸಂಸ್ಥೆಯನ್ನಾಗಿ ರೂಪಿಸಿದ ಸಾಧಕರಿವರು.
17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾಗಿ ಅಳಿಕೆಯ ತನ್ನ ವಿದ್ಯಾಸಂಸ್ಥೆಯಲ್ಲಿ ಸಮ್ಮೇಳನವು ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದ ಅವರ ಸಾಹಿತ್ಯ ಪರ ಒಲವು ಸ್ತುತ್ಯರ್ಹವಾದುದು ಎಂದು ಕೊಂಡಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯಕ್ಷಗಾನ ವಿದ್ವಾಂಸ ಡಾ ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ನಂದಳಿಕೆ ಬಾಲಚಂದ್ರ ರಾವ್, ಪೊಳಲಿ ನಿತ್ಯಾನಂದ ಕಾರಂತ, ಜಿ.ಕೆ. ಭಟ್ ಸೇರಾಜೆ, ಜನಾರ್ದನ ಹಂದೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಮೊದಲಾದವರು ಪುಷ್ಪನಮನ ಸಲ್ಲಿಸಿದರು.
Comments are closed.