ರಾಷ್ಟ್ರೀಯ

ನೀರವ್‌ ಮೋದಿ ಹೆಂಡತಿ ವಿರುದ್ಧ ಜಾಗತಿಕ ಬಂಧನ ವಾರೆಂಟ್‌

Pinterest LinkedIn Tumblr


ನವದೆಹಲಿ: ಭಾರತೀಯ ಬ್ಯಾಂಕ್‌ಗಳಿಗೆ ಬಹುಕೋಟಿ ಹಣ ವಂಚನೆ ಆರೋಪದ ಅಡಿಯಲ್ಲಿ ಸಿಲುಕಿ ದೇಶದಿಂದಲೇ ಪರಾರಿಯಾಗಿದ್ದ ವಜ್ರ ವ್ಯಾಪಾರಿ ನೀರವ್ ಮೋದಿ ಯವರ ಪತ್ನಿ ಅಮಿ ಮೋದಿ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಅಥವಾ ಜಾಗತಿಕ ಬಂಧನ ವಾರಂಟ್ ಹೊರಡಿಸಿದೆ. ಭಾರತದಲ್ಲಿ ಆಕೆಯ ವಿರುದ್ಧ ದಾಖಲಾದ ಮನಿ ಲಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ.

ಇದಲ್ಲದೆ, ನೀರವ್ ಮೋದಿ, ಅವರ ಸಹೋದರ ನೇಹಾಲ್ (ಬೆಲ್ಜಿಯಂ ಪ್ರಜೆ) ಮತ್ತು ಅವರ ಸಹೋದರಿ ಪೂರ್ವಿ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ.

ಅಮಿ ಮೋದಿ ಕೊನೆಯ ಬಾರಿಗೆ 2019 ರಲ್ಲಿ ಅಮೆರಿಕದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈಗ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಬಗ್ಗೆ ತನಿಖಾ ಏಜೆನ್ಸಿಗಳಿಗೆ ಖಚಿತತೆ ಇಲ್ಲ. ಈಗಾಗಲೇ ಆರ್ಥಿಕ ಅಪರಾಧಿ ಎಂದು ಮುದ್ರೆ ಒತ್ತಲಾಗಿರುವ ನೀರವ್ ಮೋದಿ ಅವರನ್ನು ಲಂಡನ್‌ ಪೊಲೀಸರು ಬಂಧಿಸಿದ್ದು ಜೈಲಿನಲ್ಲಿಟ್ಟಿದ್ದಾರೆ. ಅವರನ್ನು ಇದೀಗ ಭಾರತಕ್ಕೆ ಹಸ್ತಾಂತರ ಮಾಡುವ ಕುರಿತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.

ಭಾರತದಲ್ಲಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿರುವ ನೀರಜ್ ಮೋದಿ ಅವರ ಪತ್ನಿ ಅಮಿ ಮೋದಿ ಕಳೆದ ವರ್ಷ ಫೆಬ್ರವರಿಯಲ್ಲಿ ನ್ಯೂಯಾರ್ಕ್ ನಗರದಲ್ಲಿ ಎರಡು ಅಪಾರ್ಟ್‌ಮೆಂಟ್‌ಗಳನ್ನು 30 ಮಿಲಿಯನ್ ಡಾಲರ್‌ ಹಣ ನೀಡಿ ಖರೀದಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಅಮಿ ಮೋದಿ ವಿರುದ್ಧ ಸಲ್ಲಿಸಿರುವ ಪೂರಕ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

ಕಳೆದ ವರ್ಷ ವಿದೇಶದಲ್ಲಿರುವ ನೀರವ್‌ ಮೋದಿ ಆಸ್ತಿಗಳನ್ನು ಭಾರತ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಪೈಕಿ ವಿದೇಶದಲ್ಲಿದ್ದ ಅಪಾರ್ಟ್‌‌ಮೆಂಟ್‌ಗಳ ಬೆಲೆಯೇ 637 ಕೋಟಿ ರೂ ಆಗಿದ್ದು, ಲಂಡನ್‌ನಲ್ಲಿದ್ದ ಅಪಾರ್ಟ್‌‌ಮೆಂಟ್‌ ಬೆಲೆ 56.97ಕೋಟಿ ರೂ ಎಂದು ಅಂದಾಜಿಸಲಾಗಿದೆ.

ನೀರವ್ ಮೋದಿ (48), ಮತ್ತು ಅವರ ಚಿಕ್ಕಪ್ಪ, ಮೆಹುಲ್ ಚೋಕ್ಸಿ (60) ಇಬ್ಬರೂ ವಿದೇಶಿ ಸಾಲಗಳನ್ನು ಪಡೆಯುವ ಸಲುವಾಗಿ ಭಾರತ ಸರ್ಕಾರದ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ ನಕಲಿ ಗ್ಯಾರಂಟಿಗಳನ್ನು ನೀಡಿದ ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಸಿಬಿಐ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಅಧಿಕಾರಿಗಳು ನೀರವ್‌ ಮೋದಿ ಮತ್ತು ಮೇಹುಲ್ ಚೋಕ್ಸಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಈ ಚಾರ್ಜ್‌‌ಶೀಟ್‌ನಲ್ಲಿ ನೀರವ್‌ ಮೋದಿ 6,498.20 ಕೋಟಿ ರೂ. ಹಾಗೂ ಮೇಹುಲ್ ಚೋಕ್ಸಿ 7,080.86 ಕೋಟಿ ರೂ.ಗಳನ್ನು ಭಾರತದ ವಿವಿಧ ಬ್ಯಾಂಕುಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.ಇದನ್ನೂ ಓದಿ : COVID-19 ಲಸಿಕೆ; ಇಂದಿನಿಂದ ಪುಣೆಯಲ್ಲಿ ಆರಂಭವಾಗಲಿದೆ ಮಾನವನ ಮೇಲಿನ ಕ್ಲಿನಿಕಲ್‌ ಪ್ರಯೋಗ

ಸಿಬಿಐ ತನ್ನ ವಿಚಾರಣೆಯನ್ನು ಪ್ರಾರಂಭಿಸುವ ಮೊದಲು ಇಬ್ಬರೂ 2018 ರಲ್ಲಿ ಭಾರತದಿಂದ ಪಲಾಯನ ಮಾಡಿದರು.ನೀರವ್ ಮೋದಿಯವರನ್ನು ಕಳೆದ ವರ್ಷ ಲಂಡನ್‌ನಲ್ಲಿ ಬಂಧಿಸಲಾಗಿತ್ತು ಮತ್ತು ಪ್ರಸ್ತುತ ಅವರನ್ನು ವಾಂಡ್ಸ್‌ವರ್ತ್ ಜೈಲಿನಲ್ಲಿ ಇರಿಸಲಾಗಿದೆ. ಅಲ್ಲಿಂದ ಅವರನ್ನು ಭಾರತಕ್ಕೆ ಕರೆತರುವ ಹೋರಾಟದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿರತರಾಗಿದ್ದಾರೆ.

ಇನ್ನೂ ಮೆಹುಲ್ ಚೋಕ್ಸಿ ಕೆರಿಬಿಯನ್ ದ್ವೀಪವಾದ ಆಂಟಿಗುವಾದಲ್ಲಿದ್ದು ಅವರಿಗೆ ಆ ದೇಶದ ಪೌರತ್ವ ನೀಡಲಾಗಿದೆ. ಆದರೆ, ಇವರನ್ನು ಭಾರತಕ್ಕೆ ಹಿಂತಿರುಗದಿರಲು ಆರೋಗ್ಯ ಕಾರಣಗಳನ್ನು ಮುಂದಿಡಲಾಗಿದೆ. ಈ ನಡುವೆ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಅವರ ಪೌರತ್ವವನ್ನು ರದ್ದುಗೊಳಿಸಿ ಭಾರತಕ್ಕೆ ಹಿಂದಿರುಗಿಸಲಾಗುವುದು ಎಂದು ಆಂಟಿಗುವಾ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಕಳೆದ ವರ್ಷವೇ ತಿಳಿಸಿದ್ದರು.

Comments are closed.