
ಇಂಡೋನೇಷ್ಯಾದ ಪ್ರೊಬೊಲಿಂಗೊದಲ್ಲಿ 12ವರ್ಷದ ಬಾಲಕಿ ಎರಡು ಬಾರಿ ಸಾವನ್ನಪ್ಪಿದ ವಿಚಿತ್ರ ಘಟನೆ ನಡೆದಿದೆ.
ದೀರ್ಘಕಾಲದ ಮಧುಮೇಹದಿಂದ ಅಂಗಾಂಗ ವೈಫಲ್ಯಕ್ಕೆ ಒಳಗಾದ ಈ 12 ವರ್ಷದ ಬಾಲಕಿ ಸಿಟಿ ಮಸ್ಫುಫಾ ವರ್ದಾಳನ್ನು ಪ್ರೊಬೊಲೊಂಗೊದಲ್ಲಿರುವ ಡಾ. ಮೊಹಮ್ಮದ್ ಸಾಲೇಹ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದ ಕಾರಣ ಆಗಸ್ಟ್ 18ರ ಸಂಜೆ 6ಗಂಟೆಗೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಹಾಗಾಗಿ ಅಂದು ಸಂಜೆ 7 ಗಂಟೆಗೆ ಪಾಲಕರು ಬಾಲಕಿಯ ಮೃತದೇಹವನ್ನು ಮನೆಗೆ ವಾಪಸ್ ತಂದಿದ್ದರು.
ಬಾಲಕಿಯನ್ನು ಸಮಾಧಿ ಮಾಡುವ ಪೂರ್ವದಲ್ಲಿ ಮೃತದೇಹವನ್ನು ಸ್ವಚ್ಛಗೊಳಿಸುವ ಸಲುವಾಗಿ, ಅವರ ಸಂಪ್ರದಾಯದಂತೆ ಸ್ನಾನ ಮಾಡಿಸಲಾಗುತ್ತಿತ್ತು. ಆಗ ಈ ಬಾಲಕಿ ಒಮ್ಮೆಲೇ ಕಣ್ಣು ಬಿಟ್ಟು ಇಡೀ ಕುಟುಂಬ ಕಂಗಾಲಾಗುವಂತೆ ಮಾಡಿದಳು. ನೋಡನೋಡುತ್ತಿದ್ದಂತೆ ಅವಳ ಮೈ ಬಿಸಿಯಾಯಿತು. ಇಡೀ ದೇಹ ಚಲಿಸಲು ಶುರುಮಾಡಿತು. ಹೃದಯವೂ ಬಡಿದುಕೊಳ್ಳುತ್ತಿತ್ತು.
ಅನಿರೀಕ್ಷಿತ ಘಟನೆಯಿಂದ ಬೆಚ್ಚಿಬಿದ್ದ ಅವಳ ಪಾಲಕರು ವೈದ್ಯರನ್ನು ಕರೆಸಿದರು. ಮನೆಗೆ ಬಂದ ವೈದ್ಯರು ಬಾಲಕಿಗೆ ಮತ್ತೆ ಆಕ್ಸಿಜನ್ ಕೊಟ್ಟರು. ಆದರೆ ದುರದೃಷ್ಟವಶಾತ್ ಬಾಲಕಿ ಒಂದು ತಾಸಿನ ನಂತರ ಮತ್ತೆ ಸಾವನ್ನಪ್ಪಿದಳು.
ಈ ಘಟನೆಯ ಬಗ್ಗೆ ಬಾಲಕಿಯ ತಂದೆ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೃತದೇಹಕ್ಕೆ ಸ್ನಾನ ಮಾಡಿಸುತ್ತಿದ್ದಂತೆ ನನ್ನ ಮಗಳ ದೇಹ ಬಿಸಿಯಾಯಿತು ಎಂದಿದ್ದಾರೆ.
ಎರಡನೇ ಬಾರಿಗೆ ಮೃತಪಟ್ಟಾಗಲೂ ಮತ್ತೊಮ್ಮೆ ಸ್ನಾನ ಮಾಡಿಸಿ, ನಂತರ ಸಮಾಧಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಘಟನೆಯ ಬಗ್ಗೆ ಲುಂಬಾಂಗ್ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಅವರು ತನಿಖೆ ನಡೆಸುತ್ತಿದ್ದಾರೆ.
Comments are closed.