
ನವದೆಹಲಿ: ಕರೊನಾ ವೈರಸ್ ಇದೀಗ ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಲೇ ಇದೆ. ಬಡವ, ಬಲ್ಲಿದ, ಭಿಕ್ಷುಕ, ಕೋಟ್ಯಧಿಪತಿ ಯಾವುದರ ಭೇದ ಭಾವವಿಲ್ಲದೇ ಎಲ್ಲರ ದೇಹವನ್ನೂ ಹೊಕ್ಕಿ ಹಲವರ ಪ್ರಾಣವನ್ನೂ ಹೀರಿ ಹಿಂಡಿ ಹಿಪ್ಪೆ ಮಾಡಿಬಿಟ್ಟಿದೆ.
ಅಂಥದ್ದರಲ್ಲಿ ಈ ಕರೊನಾ 20 ಸಾವಿರಕ್ಕೂ ಅಧಿಕ ಮಂದಿಯ ಜೀವವನ್ನು ಉಳಿಸಿದೆ ಎಂದರೆ ನೀವು ನಂಬುತ್ತೀರಾ?
ನಂಬಲೇಬೇಕು. ಏಕೆ ಗೊತ್ತಾ? ಕರೊನಾದಿಂದಾಗಿ ಜನರು ಬೀದಿಗಿಳಿಯುವುದು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆ ಅಪಘಾತಗಳು ಕಡಿಮೆ ಆಗಿವೆ. ಹಿಂದಿನ ಎಲ್ಲಾ ವರ್ಷಗಳ ಸರಾಸರಿ ಲೆಕ್ಕಾಚಾರ ಹಾಕಿದರೆ, ರಸ್ತೆ ಅಪಘಾತದಲ್ಲಿ ಮಡಿದವರ ಸಂಖ್ಯೆಗೂ ಇದೀಗ ಕರೊನಾ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆಗೂ ಲೆಕ್ಕ ಹಾಕಿದರೆ 20 ಸಾವಿರಕ್ಕೂ ಅಧಿಕ ಮಂದಿ ಕರೊನಾದಿಂದಾಗಿ ಬಚಾವಾಗಿದ್ದಾರೆ ಎಂದಿದೆ.
ರಸ್ತೆ ಸುರಕ್ಷತೆ ಕುರಿತು ಸುಪ್ರೀಂ ಕೋರ್ಟ್ ಸಮಿತಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಏಪ್ರಿಲ್ ಮತ್ತು ಜೂನ್ ತಿಂಗಳ ಮಧ್ಯೆ ನಡೆದ ಅಪಘಾತಗಳ ಮಾಹಿತಿಯನ್ನು ನೀಡಿವೆ.
ಕಳೆದ ವರ್ಷ ಏಪ್ರಿಲ್ ಮತ್ತು ಜೂನ್ ನಡುವೆ 41,032 ಮಂದಿ ಅಪಘಾತಕ್ಕೆ ಬಲಿಯಾಗಿದ್ದರು. ಆದರೆ ಈ ವರ್ಷ ಈ ಅವಧಿಯಲ್ಲಿ 20,732 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೃತರ ಸಂಖ್ಯೆ ಶೇ.49.47ರಷ್ಟು ಇಳಿಕೆಯಾಗಿದೆ.
ಈ ಅವಧಿಯಲ್ಲಿ 60,118 ರಸ್ತೆ ಅಪಘಾತಗಳು ಸಂಭವಿಸಿದರೆ ಕಳೆದ ವರ್ಷ1,23,150 ಅಪಘಾತಗಳು ಸಂಭವಿಸಿತ್ತು. ಕಳೆದ ವರ್ಷ ಏಪ್ರಿಲ್ -ಜೂನ್ ಅವಧಿಯಲ್ಲಿ 1,27,157 ಮಂದಿ ರಸ್ತೆ ಅಪಘಾತದಿಂದ ಗಾಯಗೊಂಡರೆ ಈ ವರ್ಷ 57,755 ಮಂದಿ ಗಾಯಗೊಂಡಿದ್ದಾರೆ.
ಭಾರತದಲ್ಲಿ ರಸ್ತೆ ಗುಣಮಟ್ಟ ಸುಧಾರಣೆ ಮತ್ತು ಅಪಘಾತ ಕಡಿಮೆ ಮಾಡಲು ಪ್ರತಿ ಮೂರು ಮೂರು ತಿಂಗಳಿಗೊಮ್ಮೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆ ಅಪಘಾತಗಳ ವರದಿಯನ್ನು ಸುಪ್ರೀಂ ಕೋರ್ಟ್ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ಇದರಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
Comments are closed.