
ಹಾಸನ; ಅದು ಗೌರಿ ಗಣೇಶ ಹಬ್ಬದ ಸಮಯದಲ್ಲಿ ನಡೆಯುತ್ತಿದ್ದ ವಿಶೇಷ ಜಾತ್ರಾ ಮಹೋತ್ಸವ. ಸುಮಾರು 150 ವರ್ಷಗಳ ಇತಿಹಾಸವುಳ್ಳ ಈ ಜಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ದಂಡುಗಟ್ಟಿಕೊಂಡು ಬರುತ್ತಿದ್ದರು. ಈ ವಿಶಿಷ್ಟ ಗಣೇಶ ಗೌರಿ ಜಾತ್ರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ರದ್ದಾಗಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಕ್ಷೇತ್ರ ಮಾಡಾಳು ಸ್ವರ್ಣ ಗೌರಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಇಲ್ಲಿ ವರ್ಷಕ್ಕೆ ಒಮ್ಮೆ ಗೌರಿ ಗಣೇಶ ಹಬ್ಬದ ಸಮಯದಲ್ಲಿ ಅದ್ದೂರಿ ಜಾತ್ರೆ ನಡೆಯುತ್ತೆ. ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನರು ಈ ಜಾತ್ರೆಗೆ ಬರುತ್ತಾರೆ. ಆದರೆ ಈ ಬಾರಿ ಕೋವಿಡ್-19 ಸೋಂಕಿನ ಭೀತಿಯಲ್ಲಿ ಇಲ್ಲಿನ ಭಕ್ತ ಮಂಡಳಿ 159ನೇ ಜಾತ್ರಾ ಮಹೋತ್ಸವವನ್ನು ರದ್ದು ಮಾಡಿದೆ.
ಆಗಸ್ಟ್ 21 ರಿಂದ 30ರವರೆಗೆ ಸ್ವರ್ಣಗೌರಿ ಜಾತ್ರೆ ನಡೆಸಲು ಮೊದಲೇ ದಿನಾಂಕ ನಿಗದಿಯಾಗಿತ್ತು. ಕಡಲೆ ಹಿಟ್ಟಿನಿಂದ ಮಾಡಿದ ಸ್ವರ್ಣ ಗೌರಿ ಇಲ್ಲಿನ ಪ್ರಮುಖ ಕೇಂದ್ರಬಿಂದು. ಪ್ರತೀ ಬಾರಿ ಕೋಡಿ ಮಠದ ಶ್ರೀಗಳು ಆಗಮಿಸಿ ಈ ಗೌರಿ ಮೂರ್ತಿಗೆ ಮೂಗುನತ್ತು ಹಾಕುವ ಮೂಲಕ ಜಾತ್ರೆಗೆ ಚಾಲನೆ ನೀಡುತ್ತಾರೆ. 100 ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ನಡೆದುಕೊಂಡು ಬಂದಿದ್ದ ಜಾತ್ರೆಗೆ ಈ ಬಾರಿ ಕೊರೋನ ವಿಘ್ನ ತಂದೊಡ್ಡಿದೆ. ಅಷ್ಟೇ ಅಲ್ಲದೇ ದೇವಾಲಯಕ್ಕೆ ಈ ಬಾರಿ ಸಾರ್ವಜನಿಕರಿಗೆ ನಿರ್ಭಂಧ ಹೇರಲಾಗಿದೆ.
ಈ ಜಾತ್ರೆಯಲ್ಲಿ ಪ್ರತೀ ಬಾರಿ ಮಡಲಕ್ಕಿ ನೀಡಿ, ಸೀರೆ ನೀಡಿ ಲಕ್ಷಾಂತರ ಭಕ್ತರು ಹರಕೆ ತೀರಿಸುತ್ತಿದ್ದರು. ಹಾಗೆ ಲಕ್ಷಾಂತರ ಮೌಲ್ಯದ ಕರ್ಪೂರವನ್ನೂ ಬೆಳಗಿಸಲಾಗುತ್ತಿತ್ತು. ಆದರೆ ಈ ಬಾರಿ ಇದ್ಯಾವುದಕ್ಕೂ ಅವಕಾಶ ಇಲ್ಲದಿರುವುದು ಭಕ್ತರಿಗೆ ನಿರಾಸೆ ತಂದಿದೆ.
ಕೊರೋನಾ ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ಪ್ರತಿದಿನ ಏರಿಕೆಯಾಗುತ್ತಲೇ ಇದೆ. ಕೊರೋನಾ ನಿಯಂತ್ರಣಕ್ಕೆ ಈ ಹಿಂದೆ ಲಾಕ್ಡೌನ್ ಸಹ ಘೋಷಿಸಲಾಗಿತ್ತು. ಇದೀಗ ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಆದರೆ, ಹೆಚ್ಚು ಜನ ಸೇರುವ ಕಾರ್ಯಕ್ರಮ ನಡೆಸಲು ಹಾಗೂ ಮಾಲ್, ಥಿಯೇಟರ್, ಶಾಲಾ-ಕಾಲೇಜು ತೆರೆಯಲು ಇನ್ನು ಅನುಮತಿ ನೀಡಿಲ್ಲ. ಹಾಗಾಗಿ ಈ ವರ್ಷ ಯಾವುದೇ ಜಾತ್ರೆಗಳು ನಡೆದಿಲ್ಲ.
Comments are closed.