
ಛತ್ತೀಸ್ಗಢದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಬಿಲಾಸ್ಪುರದ ಖುಟಾಘಾಟ್ ಡ್ಯಾಂನಿಂದ ನೀರನ್ನು ಹೊರಬಿಡಲಾಗಿದೆ. ಡ್ಯಾಂನಿಂದ ಹೊರಬಿಟ್ಟ ನೀರಿಗೆ ಸೇತುವೆಯಿಂದ ಹಾರಿದ ವ್ಯಕ್ತಿಯೊಬ್ಬ ನೀರಿನಿಂದ ದಡಕ್ಕೆ ಬರಲಾಗದೆ ಬರೋಬ್ಬರಿ 16 ಗಂಟೆ ನೀರಿನಲ್ಲಿ ಮರದ ಕೊಂಬೆ ಹಿಡಿದುಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿದ್ದಾನೆ. ಆತನನ್ನು ರಕ್ಷಣೆ ಮಾಡಲು ಸಾಧ್ಯವಾಗದೆ ಕೊನೆಗೆ ವಾಯುಪಡೆಯ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ಆತನನ್ನು ರಕ್ಷಿಸಿದ್ದಾರೆ.
ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಭಾರೀ ಮಳೆಯಾಗಿರುವುದರಿಂದ ಖುಟಘಾಟ್ ಡ್ಯಾಂ ಬಳಿ ನೀರನ್ನು ನೋಡಲು ಜನರು ಸೇರಿದ್ದರು. ಈ ವೇಳೆ ಸೇತುವೆಯಿಂದ ನೀರಿಗೆ ಹಾರಿದ ಯುವಕನಿಗೆ ದಡ ಸೇರಲು ಸಾಧ್ಯವಾಗಲಿಲ್ಲ. ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಅಣೆಕಟ್ಟಿನಿಂದ ಹೆಚ್ಚಿನ ನೀರನ್ನು ಹೊರಗೆ ಬಿಡಲಾಗಿದೆ. ಆದರೆ, ಆತನಿಗೆ ಈಜಿ ದಡ ಸೇರಲು ಸಾಧ್ಯವಾಗದೆ ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾಗ ನೀರಿನ ದಡದಲ್ಲಿದ್ದ ಮರದ ಕೊಂಬೆಯನ್ನು ಹಿಡಿದ ವ್ಯಕ್ತಿ ಸಹಾಯಕ್ಕಾಗಿ ಅಂಗಲಾಚಿದ್ದ. ನಿನ್ನೆಯಿಂದ ಸತತ 16 ಗಂಟೆಗಳ ಕಾಲ ಆ ರೆಂಬೆಯನ್ನು ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಕಾಯುತ್ತಿದ್ದ. ಆತನನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.
ನೀರಿನ ಪ್ರವಾಹ ಹೆಚ್ಚಾಗಿದ್ದರಿಂದ ಯಾರಿಗೂ ಆತನನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಬಿಲಾಸ್ಪುರ ಡ್ಯಾಂ ಬಳಿ ಪೊಲೀಸ್ ಅಧಿಕಾರಿಗಳ ತಂಡ ರಕ್ಷಣೆಗಾಗಿ ತೆರಳಿದ್ದರು. ನಿನ್ನೆ ಸಂಜೆಯಿಂದ ಪೊಲೀಸ್ ಅಧಿಕಾರಿಗಳು ವ್ಯಕ್ತಿಯ ರಕ್ಷಣೆಗಾಗಿ ಭಾರತೀಯ ವಾಯುಸೇನೆಯ ನೆರವನ್ನು ಕೋರಿದ್ದರು. ಇಂದು ಬೆಳಗ್ಗೆ ವಾಯುಪಡೆಯ ಸಿಬ್ಬಂದಿ ಹೆಲಿಕಾಪ್ಟರ್ ಸಹಾಯದಿಂದ ನೀರಿನ ಮಧ್ಯೆ ಸಿಲುಕಿದ್ದ ಯುವಕನನ್ನು ರಕ್ಷಿಸಿದ್ದಾರೆ.
ಹುಚ್ಚು ಧೈರ್ಯದಲ್ಲಿ ನೀರಿಗೆ ಹಾರಿದ ಯುವಕ ಬಿಲಾಸ್ಪುರ ಬಳಿಯ ಗಾಢವಾರಿ ಹಳ್ಳಿಯ ಜಿತೇಂದ್ರ ಕಶ್ಯಪ್ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಣೆಕಟ್ಟೆಯಿಂದ ನೀರು ಬಿಡುತ್ತಿದ್ದಂತೆ ತಾನು ಈಜಿ ದಡ ಸೇರುತ್ತೇನೆ ಎಂದು ಸವಾಲು ಹಾಕಿ, ಆತ ನೀರಿಗೆ ಹಾರಿದ್ದ. ಆದರೆ, ಹಾರಿದ ನಂತರ ಆತನಿಗೆ ತಾನು ಮಾಡಿದ್ದು ಎಷ್ಟು ದೊಡ್ಡ ತಪ್ಪು ಎಂದು ಗೊತ್ತಾಗಿದೆ. ನೀರಿನ ರಭಸ ನೋಡಿ ಕಂಗಾಲಾಗಿ ಸಹಾಯಕ್ಕೆ ಕಿರುಚಿದ್ದ. ಬಳಿಕ 16 ಗಂಟೆ ಪ್ರವಾಹದ ನೀರಿನಲ್ಲಿ ರೆಂಬೆ ಹಿಡಿದುಕೊಂಡು ನಿಂತು ಬದುಕುಳಿದಿದ್ದಾನೆ.
Comments are closed.