ಕುಂದಾಪುರ: ಕುಂದಾಪುರ ತಾಲೂಕು ಗೋಪಾಡಿಯ ಕೊರಗ ಕಾಲನಿಯಾದ ರೋಶನಿಧಾಮದ ನಿವಾಸಿ ಸುನೀತಾ ಎನ್ನುವ ವಿದ್ಯಾರ್ಥಿನಿ ಶನಿವಾರದಂದು ಕುಂದಾಪುರ ಉಪವಿಭಾಗದ ಸಹಾಯಕ ಅಧೀಕ್ಷಕರ ಕಛೇರಿಯಲ್ಲಿ ನಡೆದ ಸ್ವಾಂತ್ರಂತ್ರ್ಯೋತ್ಸವದ ಧ್ವಜಾರೋಹಣಗೈದರು.







ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು ಅದರಲ್ಲಿ ರೋಷನಿಧಾಮದ ಸುನಿತಾ 434 ಅಂಕ ಪಡೆದು ಕಾಲನಿಗೆ ಹೆಸರು ತಂದಿದ್ದಳು. ಈ ವಿಚಾರದ ಬಗ್ಗೆ ತಿಳಿದ ಕುಂದಾಪುರ ಎಎಸ್ಪಿ ಅತೀವ ಆನಂದ ವ್ಯಕ್ತಪಡಿಸಿದ್ದರು. ಅಲ್ಲದೆ ಬಾಲಕಿ ಪರೀಕ್ಷೆ ಬರೆಯಲು ಸಹಕಾರ ನೀಡಿದ್ದ ಗೋಪಾಡಿ ಗ್ರಾಮಪಂಚಾಯತ್ ನಿಕಟಪೂರ್ವಾಧ್ಯಕ್ಷೆ ಸರಸ್ವತಿ ಪುತ್ರನ್ ಹಾಗೂ ಗಣೇಶ್ ಪುತ್ರನ್ ಅವರಿಗೆ ಫೋನ್ ಮಾಡಿ ಸುನಿತಾ ಅವರಿಂದ ಧ್ವಜಾರೋಹಣ ಮಾಡಿಸುವ ಬಗ್ಗೆ ತಿಳಿಸಿದರು.
ಅದರಂತೆಯೇ ಇಂದು ಬೆಳಿಗ್ಗೆ ಕುಂದಾಪುರ ಉಪವಿಭಾಗದ ಸಹಾಯಕ ಅಧೀಕ್ಷಕರ ಕಚೇರಿಯಲ್ಲಿ ನಡೆದ ಧ್ವಜಾರೋಹಣದಲ್ಲಿ ಸುನೀತಾ ಹಾಗೂ ರೋಷನಿಧಾಮದ ಇತರೆ ಮಕ್ಕಳು, ಕುಂಭಾಸಿ ಮಕ್ಕಳ ಮನೆಯ ಮಕ್ಕಳು ಭಾಗವಹಿಸಿದರು. ಇದೇ ಸಂದರ್ಭ ಸುನೀತಾ ಹಾಗೂ ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾದ ಅದೇ ಕಾಲನಿಯ ವಿದ್ಯಾರ್ಥಿನಿ ಪ್ರಶಿಲಾ ಅವರನ್ನು ಸನ್ಮಾನಿಸಲಾಯಿತು.
ಧ್ವಜಾರೋಹಣದ ಬಳಿಕ ಮಾತನಾಡಿದ ಎಎಸ್ಪಿ, ಬಡತನದ ಪರಿಸ್ಥಿಯಲ್ಲಿ ಕಷ್ಟಪಟ್ಟು ಓದಿ ಉತ್ತಮ ಅಂಕ ಪಡೆದಿರುವುದು ನಿಜಕ್ಕೂ ಹೆಮ್ಮೆ ವಿಚಾರವಾಗಿದ್ದು ಈ ಕಾಲನಿಯ ಯಾರಾದರೊಬ್ಬರು ಪೊಲೀಸ್ ಇಲಾಖೆ ಸೇವೆಗೆ ಸೇರಬೇಕು. ಇನ್ನು ಕೊರಗ ಸಮುದಾಯದವರು ಭಯ ಹಾಗೂ ಕೀಳರಿಮೆ ಬಿಟ್ಟು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದರು.
ಈ ಸಂದರ್ಭ ಗೋಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಸರಸ್ವತಿ ಪುತ್ರನ್, ಸಮಾಜಸೇವಕ ಗಣೇಶ್ ಪುತ್ರನ್, ಕೊರಗ ಸಮುದಾಯದ ಮುಖಂಡ ಗಣೇಶ್ ಕುಂದಾಪುರ, ಎಎಸ್ಪಿ ಅವರ ಪತ್ನಿ ಅನಂತಾ ಮೊದಲಾದವರು ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.