
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ‘ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ’ ವೇದಿಕೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರಾಮಾಣಿಕರನ್ನು ಗೌರವಿಸುವ ನಮ್ಮ ಹೊಸ ಪ್ರಯಾಣ ಇಂದು ಆರಂಭವಾಗುತ್ತಿದೆ. ದೇಶದ ಬೆಳವಣಿಗೆಯಲ್ಲಿ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ತೆರಿಗೆ ಪಾವತಿ ಮಾಡುವವರು ಬಹಳ ದೊಡ್ಡ ಪಾತ್ರ ವಹಿಸುತ್ತಾರೆ ಎಂದರು.
ಮನುಷ್ಯರ ಮಧ್ಯೆ ಪ್ರವೇಶವಿಲ್ಲದೆ, ಸಂಪರ್ಕವಿಲ್ಲದೆ ಪಾರದರ್ಶಕವಾಗಿ ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ಮೌಲ್ಯಮಾಪನ, ಮುಖತಃ ಹೋಗದೆ ಆನ್ ಲೈನ್ ಮೂಲಕ ಕುಂದುಕೊರತೆ ನಿವಾರಿಸುವ ಮತ್ತು ತೆರಿಗೆದಾರರ ಚಾರ್ಟರ್ (faceless assessment, faceless appeal, and taxpayers charter) ಈ ವೇದಿಕೆ ಪ್ರಮುಖ ಸುಧಾರಣೆಯಾಗಲಿದ್ದು ಫೇಸ್ ಲೆಸ್ ಅಸ್ಸೆಸ್ಸ್ ಮೆಂಟ್ ಮತ್ತು ತೆರಿಗೆ ಪಾವತಿದಾರರ ಸಮೂಹ ಇಂದಿನಿಂದ ಜಾರಿಗೆ ಬರುತ್ತದೆ. ಫೇಸ್ ಲೆಸ್ ಅಪೀಲ್ ಸೆಪ್ಟೆಂಬರ್ 25ರಿಂದ ಲಭ್ಯವಾಗಲಿದೆ ಎಂದು ತಿಳಿಸಿದರು.
ಭಾರತೀಯ ತೆರಿಗೆ ವ್ಯವಸ್ಥೆಯಲ್ಲಿ ಹೊಸ ಮೂಲಭೂತ ಸುಧಾರಣೆಗಳಾಗಲಿದ್ದು ತೆರಿಗೆ ವ್ಯವಸ್ಥೆಯನ್ನು ತಡೆರಹಿತವಾಗಿ, ಯಾವುದೇ ಪ್ರಯಾಸಗಳಿಲ್ಲದೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ನೇರ ತೆರಿಗೆ ಪಾವತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪಾರದರ್ಶಕ ತೆರಿಗೆ ವೇದಿಕೆಗೆ ಚಾಲನೆ ನೀಡಲಾಗಿದ್ದು, ಇದರಿಂದ ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ತೆರಿಗೆದಾರರಿಗೆ ಹೊಸ ಪದ್ಧತಿ ಜಾರಿ ಮಾಡಿದ್ದೇವೆ. ದೇಶದಲ್ಲಿ ಹಲವಾರು ಬದಲಾವಣೆಯಾಗುತ್ತಿದೆ. ತೆರಿಗೆ ನೀತಿಯಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ ಎಂದರು.
ಕಳೆದ ಆರು ವರ್ಷಗಳ ಎನ್ ಡಿಎ ಸರ್ಕಾರ ಆಡಳಿತದಲ್ಲಿ ಬ್ಯಾಂಕಿಂಗ್ ನ್ನು ಅನ್ ಬ್ಯಾಂಕಿಂಗ್ ಮಾಡುವುದು. ಅಸುರಕ್ಷಿತರನ್ನು ಸುರಕ್ಷಿತಗೊಳಿಸುವುದು, ಹೂಡಿಕೆ ಇಲ್ಲದೆಡೆ ಹೂಡಿಕೆ ಮಾಡುವುದರ ಬಗ್ಗೆ ನಾವು ಗಮನ ಹರಿಸಿದ್ದೇವೆ. ಕಳೆದ ಆರು ವರ್ಷಗಳಲ್ಲಿ ತೆರಿಗೆ ಆಡಳಿತದಲ್ಲಿ ಹೊಸ ಆಡಳಿತ ಮಾದರಿಗೆ ಭಾರತ ಸಾಕ್ಷಿಯಾಗಿದೆ. ನಾವು ತೆರಿಗೆ ಪಾವತಿಯಲ್ಲಿನ ಕ್ಷಿಷ್ಟತೆ, ವ್ಯಾಜ್ಯಗಳನ್ನು ಕಡಿಮೆ ಮಾಡಿ ಪಾರದರ್ಶಕತೆ, ತೆರಿಗೆ ಪಾಲನೆ ಮತ್ತು ತೆರಿಗೆ ಪಾವತಿದಾರರ ನಂಬಿಕೆ ಹೆಚ್ಚಿಸಿದ್ದೇವೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪಾರದರ್ಶಕ ವ್ಯವಸ್ಥೆಯನ್ನು ಪರಿಚಯಿಸುವುದರ ಜೊತೆಗೆ ತೆರಿಗೆದಾರರ ಸುಧಾರಣೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದಾಯ ತೆರಿಗೆ ಇಲಾಖೆಯು ಹೊಣೆಗಾರಿಕೆಯನ್ನು ಒದಗಿಸುವುದಕ್ಕಾಗಿ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್(ಡಿಐಎನ್) ಪರಿಚಯಿಸಲಿದೆ. ಇದು ಎಲ್ಲ ರೀತಿಯ ಸಂವಹನಕ್ಕಾಗಿದ್ದು ಡಿಐಎನ್ ಇಲ್ಲದೆ ಐಟಿ ಇಲಾಖೆಯಿಂದ ನೀಡುವ ದಾಖಲೆಗಳು ಅಮಾನ್ಯವಾಗಿರುತ್ತದೆ ಎಂದರು.
Comments are closed.