ರಾಷ್ಟ್ರೀಯ

ಹಿಂದಿ ಭಾಷೆ ಬಾರದ ನಾನು ಭಾರತೀಯಳಲ್ಲವೇ?: ಡಿಎಂಕೆ ನಾಯಕಿ, ಲೋಕಸಭಾ ಸದಸ್ಯೆ ಕನಿಮೋಳಿ

Pinterest LinkedIn Tumblr


ಹೊಸದಿಲ್ಲಿ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿರುವ ತಮಿಳುನಾಡು, ಇದೀಗ ಮತ್ತೊಂದು ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದೆ. ಡಿಎಂಕೆ ನಾಯಕಿ, ಲೋಕಸಭಾ ಸದಸ್ಯೆ ಕನಿಮೋಳಿ ಅವರು ಈ ಪ್ರಶ್ನೆಯನ್ನು ಎತ್ತಿದ್ದು, ಹಿಂದಿ ಬಾರದ ನಾನು ಭಾರತೀಯಳಲ್ಲವೇ ಎಂದು ಪ್ರಶ್ನಿಸಿದ್ಧಾರೆ.

ಏರ್‌ಪೋರ್ಟ್‌ನಲ್ಲಿ ಸಿಐಎಸ್‌ಎಫ್‌ ಮಹಿಳಾ ಸಿಬ್ಬಂದಿಯೊಬ್ಬರು ಕನಿಮೋಳಿ ಅವರನ್ನು ಹಿಂದಿಯಲ್ಲಿ ಮಾತನಾಡಿಸಿದ್ದಾರೆ. ಈ ವೇಳೆ ಕನಿಮೋಳಿ ತಮಿಳು ಅಥವಾ ಇಂಗ್ಲೀಷ್‌ನಲ್ಲಿ ಪ್ರಶ್ನಿಸುವಂತೆ ಕೇಳಿದ್ದಾರೆ. ಆಗ ಮಹಿಳಾ ಅಧಿಕಾರಿ ನಿಮಗೆ ಹಿಂದಿ ಬರುವುದಿಲ್ಲವೇ, ನೀವು ಭಾರತೀಯರಲ್ಲವೇ ಎಂದು ಪ್ರಶ್ನಿಸಿದರು ಎಂದು ಕನಿಮೋಳಿ ಆರೋಪಿಸಿದ್ದಾರೆ.

ನಾನು ಭಾರತೀಯಳು ಎಂದು ಸಾಬೀತು ಮಾಡಲು ಹಿಂದಿ ಕಲಿತಿರಬೇಕೇ ಎಂದು ಪ್ರಶ್ನಿಸಿರುವ ಕನಿಮೋಳಿ ಈ ಸಂಬಂಧ ಟ್ವೀಟ್‌ ಕೂಡಾ ಮಾಡಿದ್ದಾರೆ. #hindiimposition ಹ್ಯಾಷ್‌ ಟ್ಯಾಗ್ ಬಳಸಿ ಅವರು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರು ಪಕ್ಷಬೇಧ ಮರೆತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ತಮಿಳು ಭಾಷೆಯಲ್ಲೇ ಟ್ಟೀಟ್ ಮಾಡಿ ತಮಗೆ ಹಿಂದಿ ಹೇರಿಕೆ ಮಾಡುವ ಯಾವುದೇ ಇರಾದೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ, ಸಿಐಎಸ್‌ಎಫ್‌ ಮಹಿಳಾ ಸಿಬ್ಬಂದಿ ತಮಗೆ ಹಿಂದಿ ಬರದಿದ್ದರೆ ಭಾರತೀಯರಲ್ಲ ಎನ್ನುವ ರೀತಿಯಲ್ಲಿ ಪ್ರಶ್ನಿಸಿದ್ದಾರೆ ಎಂದು ಕನಿಮೋಳಿ ಆರೋಪಿಸಿದ್ದು, ವಿವಾದಕ್ಕೆ ಮತ್ತೊಂದು ಆಯಾಮ ಸಿಕ್ಕಂತಾಗಿದೆ.

Comments are closed.