ಕರಾವಳಿ

ಕೋಡಿಯಲ್ಲಿ ಕಡಲ್ಕೊರೆತ ಹಿನ್ನೆಲೆ 400ಮೀ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಮ- ಸಚಿವ ಕೋಟ (Video)

Pinterest LinkedIn Tumblr

ಕುಂದಾಪುರ: ಕಳೆದ ವಾರಗಳಿಂದ ಕಡಲ್ಕೊರೆತ ಹೆಚ್ಚಿದ ಕುಂದಾಪುರ ತಾಲೂಕಿನ ಕೋಡಿ ಪ್ರದೇಶಕ್ಕೆ ಶನಿವಾರ ಸಂಜೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲ್ಲಿನ ಎಂ ಕೋಡಿ ಕಡಲ್ಕೊರೆತ ಪ್ರದೇಶಕ್ಕೆ ಸಚಿವರು ಬೇಟಿ ನೀಡಿದ್ದು ಈ ವೇಳೆ ಸ್ಥಳೀಯ ಮುಖಂಡರು ಮತ್ತು ನಾಗರಿಕರು ತಮಗಾಗುತ್ತಿರುವ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು. ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ್ ಕುಮಾರ್, ಸಹಾಯಕ ಇಂಜಿನಿಯರ್ ಡಯಾಸ್ ಪ್ರಸ್ತಾವಿತ ಕಾಮಗಾರಿಯ ಬಗ್ಗೆ ವಿವರಣೆ ನೀಡಿದರು. ಕುಂದಾಪುರ ತಹಶಿಲ್ದಾರ್ ಕೆ.ಬಿ. ಆನಂದಪ್ಪ ಈ ಸಂದರ್ಭ ಇದ್ದರು.

ಪರಿಶೀಲನೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಎರಡು ಜಿಲ್ಲೆಗಳಲ್ಲಿ ಕಡಲ್ಕೊರೆತ ಹೆಚ್ಚಿದೆ. ಮೀನುಗಾರರ ಮನೆಗಳು, ರಸ್ತೆಗಳಿಗೆ ಹಾನಿಯಾಗದಂತೆ ಕ್ರಮಕೈಗೊಳ್ಳಲು ಈಗಾಗಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕೋಡಿಯಲ್ಲಿ ಕೂಡ ಕಡಲ್ಕೊರೆತ ಸಮಸ್ಯೆ ಇರುವುದು ಗಮನಕ್ಕೆ ಬಂದಿದ್ದು ಇಲ್ಲಿ 400 ಮೀಟರ್ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ಇಲಾಖೆ ಪ್ರಸ್ತಾವನೆಯನ್ನೂ ಕಳಿಸಿದ್ದಾರೆ. ಶಾಶ್ವತ ತಡೆಗೋಡೆ ಸಂದರ್ಭ ಇಲ್ಲಿ ಹಾಕಿದ ಕಲ್ಲುಗಳ ಮರುಬಳಕೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಕುಂದಾಪುರ ಪುರಸಭಾ ಸದಸ್ಯೆ ಕಮಲಾ‌ ಮಂಜುನಾಥ ಪೂಜಾರಿ, ತಾ.ಪಂ‌ ಸದಸ್ಯ ಕರಣ ಪೂಜಾರಿ ತಲ್ಲೂರು, ಸ್ಥಳೀಯ‌ ಪ್ರಮುಖರಾದ ನಾಗರಾಜ ಕಾಂಚನ್, ಮಹೇಶ್ ಪೂಜಾರಿ ಹಳೆಅಳಿವೆ ಮೊದಲಾದವರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.