
ಬೆಂಗಳೂರು: ಪತ್ನಿ ತನ್ನನ್ನು ತೊರೆದು ಹೋಗಿ ಬೇರೆ ಯುವಕನನ್ನು ಮದುವೆಯಾದ ಬಳಿಕವೂ ಆಕೆಗೆ ಕಿರುಕುಳ ನೀಡುತ್ತಿದ್ದ ಲಾರಿ ಕ್ಲೀನರ್ ಒಬ್ಬನನ್ನು ಪತ್ನಿಯ ಎರಡನೇ ಗಂಡ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಚಾಮರಾಜನಗರದ ಕೊಳ್ಳೇಗಾಲ ಮೂಲದ ಲಾರಿ ಕ್ಲೀನರ್ ಸಿದ್ದರಾಜು (26) ಕೊಲೆಗೀಡಾದ ಯುವಕ.
ನಿನ್ನೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಸಾರ್ವಜನಿಕರೊಬ್ಬರು ಕರೆ ಮಾಡಿ, ಬಸವನಗುಡಿಯ ಸುಬ್ಬಣ್ಣ ಚೆಟ್ಟಿ ರಸ್ತೆಯಲ್ಲಿ ಮೃತದೇಹವೊಂದು ಬಿದ್ದಿದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಿದ್ದರಾಜು ಕೆಲವು ವರ್ಷಗಳ ಹಿಂದೆ ತಮ್ಮದೇ ಗ್ರಾಮದ ಲತಾ (28) ಎಂಬವರನ್ನು ವಿವಾಹವಾಗಿದ್ದ. ಆದರೆ ಕೆಲವು ವರ್ಷ ದಾಂಪತ್ಯ ಜೀವನ ನಡೆಸಿದ ಲತಾ, ಸಿದ್ದರಾಜುನನ್ನು ತೊರೆದು ಹೂವು ವ್ಯಾಪಾರಿ ಲಕ್ಷ್ಮಣ್ ಅಲಿಯಾಸ್ ಲಚ್ಚಿ ಎಂಬಾತನನ್ನು ಮದುವೆಯಾಗಿದ್ದಾಳೆ.
ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಜು ಆಗಾಗ ಲತಾ ಮತ್ತು ಅವರ ತಾಯಿಯೊಂದಿಗೆ ಜಗಳ ತೆಗೆಯುತ್ತಿದ್ದ. ಎರಡು ದಿನಗಳ ಹಿಂದೆ ಸಿದ್ದರಾಜು ಮತ್ತೆ ಲತಾ ಅವರ ತಾಯಿಯೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದ. ಇದರಿಂದ ಆಕ್ರೋಶಗೊಂಡಿದ್ದ ಲಕ್ಷ್ಮಣ ಯೋಜನೆ ರೂಪಿಸಿ ಸಿದ್ದರಾಜುನನ್ನು ಹತ್ಯೆ ಮಾಡಿದ್ದಾನೆ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಮೃತ ಸಿದ್ದರಾಜು ತನ್ನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಲಾರಿ ಕಡೆಗೆ ಬರುತ್ತಿದ್ದಾಗ ಲಕ್ಷ್ಮಣ ಆತನ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪಿಯ ಬಂಧನಕ್ಕಾಗಿ ತಂಡ ರಚಿಸಲಾಗಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.