
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಸುಶಾಂತ್ ಅವರ ಸ್ನೇಹಿತೆ ರಿಯಾ ಅವರು ಸುಶಾಂತ್ ಸಾವಿಗೆ ಆರು ದಿನ ಮೊದಲೇ ಅವರ ಫೋನ್ ನಂಬರ್ ಬ್ಲಾಕ್ ಮಾಡಿದ್ದ ವಿಚಾರ ಹೊರಬಿದ್ದಿದೆ.
ಸುಶಾಂತ್ ಸಾವಿನ ಹಿಂದೆ ರಿಯಾ ಚಕ್ರವರ್ತಿ ಅವರ ಕೈವಾಡವಿದೆ ಎಂದು ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ದೂರು ದಾಖಲಿಸಿದ್ದರು. ಅದರ ಕುರಿತಾಗಿ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಬಿಹಾರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಅದಕ್ಕೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸುಪ್ರೀಂ ಕೋರ್ಟ್ಗೂ ಮಾಹಿತಿ ನೀಡಿದೆ. ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡ ಬೆನ್ನಲ್ಲೇ ರಿಯಾ ಅವರ ಕುರಿತಾಗಿ ಮತ್ತೊಂದು ವಿಚಾರ ಹೊರಬಿದ್ದಿದೆ.
ರಿಯಾ ಅವರು ಜೂನ್ 8ರಂದು ಸುಶಾಂತ್ ಅವರ ನಂಬರ್ ಬ್ಲಾಕ್ ಮಾಡಿದ್ದರು. ನಂತರ ಅವರು ಸಾಯುವವರೆಗೂ ಅವರ ನಂಬರ್ ಬ್ಲಾಕ್ ಲಿಸ್ಟ್ನಲ್ಲಿಯೇ ಇತ್ತು. ಇನ್ನೊಂದು ಕಡೆ, ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವುದರ ಕುರಿತು ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಸುಶಾಂತ್ ಕುಟುಂಬ ದೂರು ನೀಡಿರಲಿಲ್ಲ: ಸುಶಾಂತ್ ಜೀವಕ್ಕೆ ಆಪತ್ತು ಇರುವ ಬಗ್ಗೆ ಅವರ ಕುಟುಂಬಸ್ಥರು ಕಳೆದ ಫೆಬ್ರವರಿಯಲ್ಲೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಜತೆಗೆ ಸುಶಾಂತ್ ಅವರ ಸೋದರ ಮಾವ ಒ.ಪಿ. ಸಿಂಗ್ ಕೂಡ ಪೊಲೀಸ್ ಅಧಿಕಾರಿಯಾಗಿದ್ದು, ಅವರು ರಿಯಾ ಚಕ್ರವರ್ತಿ ಮತ್ತು ಸುಶಾಂತ್ ಸಂಬಂಧದ ಪ್ರಕರಣದಲ್ಲಿ ಪ್ರಭಾವ ಬಳಸಲು ಯತ್ನಿಸಿದ್ದರು ಎಂದು ಮುಂಬೈನ ಪೊಲೀಸ್ ಅಧಿಕಾರಿ ಪರಮಜಿತ್ ಸಿಂಗ್ ದಾಹಿಯಾ ಹೇಳಿದ್ದಾರೆ.
ಈ ಕುರಿತು ಒ.ಪಿ. ಸಿಂಗ್ ಜತೆ ವಾಟ್ಸ್ಆಪ್ನಲ್ಲಿ ನಡೆದ ಸಂಭಾಷಣೆಯನ್ನು ಪರಮಜಿತ್ ಸಿಂಗ್ ಬಿಡುಗಡೆ ಮಾಡಿದ್ದು, ಅವರು ಅಥವಾ ಕುಟುಂಬಸ್ಥರು ಸುಶಾಂತ್ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ಬಾಂದ್ರಾ ಪೊಲೀಸರ ಜತೆ ಯಾವುದೇ ಅಧಿಕೃತ ಸಂಭಾಷಣೆ ನಡೆಸಿಲ್ಲ ಎಂದಿದ್ದಾರೆ.
Comments are closed.