ರಾಷ್ಟ್ರೀಯ

3 ವರ್ಷ ಪ್ರೀತಿಸಿ ಮದುವೆಯಾಗಿ, 2 ತಿಂಗಳಿಗೆ ಹೆಂಡತಿಗೆ ಬೆಂಕಿಯಿಟ್ಟ!

Pinterest LinkedIn Tumblr


ಚೆನ್ನೈ: ಮೂರು ವರ್ಷದಿಂದ ಪ್ರೀತಿಸಿ ಮದುವೆಯಾದ ಎರಡೇ ತಿಂಗಳಲ್ಲಿ ಪಾಪಿ ಪತಿರಾಯನೊಬ್ಬ ತನ್ನ ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಶೇ 80 ರಷ್ಟು ಸುಟ್ಟಗಾಯಗಳಿಂದ 18 ವರ್ಷದ ಯುವತಿ ಪುದುಚೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ಹೋರಾಡುತ್ತಿದ್ದಾಳೆ.

ಮೂಲಗಳ ಪ್ರಕಾರ ತಮಿಳುನಾಡಿನ ನೈನರ್​ಪಾಳ್ಯಂ ಮೂಲದ ರಾಜೇಶ್ವರಿ ಮತ್ತು ವನೂರ್​ ಮೂಲದ ಜೀವ (21) ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ರಾಜೇಶ್ವರಿ ಕುಟುಂಬದ ವಿರೋಧದ ನಡುವೆಯೂ ಇಬ್ಬರು ಜೂನ್​ 3ರಂದು ಮದುವೆಯಾಗಿನ ವನೂರ್​ನಲ್ಲಿ ನೆಲೆಸಿದ್ದರು. ರಾಜೇಶ್ವರಿ ಮನೆಯವರ ವಿರೋಧದಿಂದಾಗಿ ವರ ಜೀವನಿಗೆ ಯಾವುದೇ ವರದಕ್ಷಿಣೆಯಾಗಲಿ ಅಥವಾ ಉಡುಗೊರೆಯಾಗಲಿ ವಧುವಿನ ಕುಟುಂಬದಿಂದ ದೊರೆಯಲಿಲ್ಲ. ಇದೇ ವಿಚಾರ ಜೀವನ ಬೇಸರಕ್ಕೆ ಕಾರಣವಾಗಿ, ಆಗಾಗ ರಾಜೇಶ್ವರಿ ಜತೆ ಕ್ಯಾತೆ ತೆಗೆಯುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ವರದಕ್ಷಿಣೆ ಕೇಳುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಹೀಗೆ ಎರಡು ತಿಂಗಳಿಂದ ಇಬ್ಬರ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು.

ಇದೇ ರೀತಿ ಆಗಸ್ಟ್​ 3ರ ರಾತ್ರಿ ರಾಜೇಶ್ವರಿ ಹಾಗೂ ಜೀವ ನಡುವೆ ಜಗಳ ಆರಂಭವಾಗಿದೆ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಕೋಪದಿಂದ ತಾಳ್ಮೆ ಕಳೆದುಕೊಂಡು ಜೀವ ರಾಜೇಶ್ವರಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೆ, ಬೆಂಕಿ ಹಚ್ಚಿದ್ದಾಗಿ ಎಲ್ಲಾದರೂ ಬಾಯ್ಬಿಟ್ಟರೆ ತಂದೆ ಹಾಗೂ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಪಾಲಕರು ಕೇಳಿದರೆ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಸುಳ್ಳು ಹೇಳುವಂತೆ ಆಕೆಯನ್ನು ಒತ್ತಾಯಿಸಿದ್ದಾನೆ.

ಶೇ. 80 ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದ ರಾಜೇಶ್ವರಿಯನ್ನು ತಕ್ಷಣ ಪುದುಚೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿದ್ದಾನೆ. ಸದ್ಯ ಆಕೆಗೆ ಚಿಕಿತ್ಸೆ ಮುಂದುವರಿದ್ದು, ನಡೆದ ಘಟನೆಯೆಲ್ಲಾ ಪೊಲೀಸರ ಎದುರು ರಾಜೇಶ್ವರಿ ವಿವರಿಸಿದ್ದಾಳೆ. ಇದೀಗ ಆಕೆಯ ಹೇಳಿಕೆ ಆಧಾರದ ಮೇಲೆ ವನೂರ್​ ಠಾಣಾ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ಆರೋಪಿ ಜೀವನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

Comments are closed.