
ಯಾದಗಿರಿ: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರವಾಹ ಎದುರಾದ ಹಿನ್ನೆಲೆ ನದಿತೀರದ ಜನರು ಜಲಕಂಟಕ ಎದುರಿಸಿದರು. ಮತ್ತೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಮತ್ತೆ ಯಾದಗಿರಿ ಜಿಲ್ಲೆಯು ಪ್ರವಾಹ ಭೀತಿ ಎದುರಿಸುವಂತಾಗಿದೆ. ಈಗಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜಲಗಂಡಾಂತರ ಜನರು ಎದುರಿಸುತ್ತಿದ್ದಾರೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಈಗ 20 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗುತಿದ್ದು, ಸಂಜೆ ವೇಳೆಗೆ 50 ಸಾವಿರ ಕ್ಯೂಸೆಕ್ ನೀರು ಬಿಡುವ ಪ್ರಮಾಣ ಹೆಚ್ಚಳ ಮಾಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಸಮೀಪವಿರುವ ಬಸವಸಾಗರ ಜಲಾಶಯ 492.25 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿದ್ದು, 33.31 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ, ಸದ್ಯಕ್ಕೆ ಬಸವಸಾಗರ ಜಲಾಶಯದಲ್ಲಿ ಒಳಹರಿವು ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಇಂದು 491.42 ಮೀಟರ್ ನೀರು ಸಂಗ್ರಹವಿದೆ. 29.57 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಡಲಾಗಿದ್ದು ,ಬಸವಸಾಗರ ಜಲಾಶಯಕ್ಕೆ ಈಗ 20 ಸಾವಿರ ಕ್ಯೂಸೆಕ್ ನೀರು ಒಳಹರಿವಿದೆ. 20 ಸಾವಿರ ಕ್ಯೂಸೆಕ್ ನೀರು ಹೊರ ಹರಿವಿದ್ದು ಎರಡು ಗೇಟ್ ಗಳ ಮೂಲಕ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ಬಸವಸಾಗರ ಜಲಾಶಯದ ವಿಭಾಗದ ಮುಖ್ಯ ಇಂಜಿನಿಯರ್ ಶಂಕರ ನಾಯಕ ನಾಯಕೋಡಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಬರುತ್ತಿರುವ ಹಿನ್ನೆಲೆ ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದ್ದು ಸಂಜೆ ವೇಳೆಗೆ 50 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡಲಾಗುತ್ತದೆ.ಮುಂದಿನ ಒಳಹರಿವು ಹೆಚ್ಚಳವಾದರೆ ಮತ್ತೆ ಹೆಚ್ಚು ಕೃಷ್ಣಾ ನದಿಗೆ ನೀರು ಬಿಡಲಾಗುತ್ತದೆ ಕಾರಣ ಜನರು ತಮ್ಮ ಜಾನುವಾರುಗಳ ಜೊತೆ ಸುರಕ್ಷತೆ ಸ್ಥಳಕ್ಕೆ ತೆರಳುವ ಜೊತೆ ಯಾವುದೇ ಕಾರಣಕ್ಕು ಕೃಷ್ಣಾ ನದಿ ಪಾತ್ರಕ್ಕೆ ತೆರಳದಂತೆ ಸೂಚನೆ ನೀಡಿದರು.
ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಳವಾದರೆ ಕೃಷ್ಣಾ ನದಿ ಪಾತ್ರ ಪ್ರವಾಹ ಭೀತಿ ಎದುರಿಸಲಿದೆ. ಸದ್ಯಕ್ಕೆ 20 ಸಾವಿರ ಕ್ಯೂಸೆಕ್ ಹಾಗೂ 50 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ಕೂಡ ಯಾವುದೇ ಸಮಸ್ಯೆಯಾಗಲ್ಲ. ಆದರೆ, ನೀರಿನ ಪ್ರಮಾಣ ಹೆಚ್ಚಳವಾದರೆ ಕೃಷ್ಣಾ ನದಿಪಾತ್ರದ ಜನರು ತತ್ತರಿಸಿ ಹೋಗುವಂತಾಗುತ್ತದೆ. ಸದ್ಯಕ್ಕೆ ಜನ ಭಯಪಡುವ ಅಗತ್ಯವಿಲ್ಲ. ಆದರೆ, ಯಾವುದೇ ಕ್ಷಣದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಅನಾಹುತ ಜರುಗುವ ಮೊದಲು ಜನರು ಎಚ್ಚರ ವಹಿಸುವುದು ಅಗತ್ಯವಾಗಿದೆ.
ಪ್ರವಾಹ ಪರಿಸ್ಥಿತಿ ಎದುರಿಸಲು ಕೂಡ ಜಿಲ್ಲಾಡಳಿತ ಸಿದ್ದವಾಗಿದ್ದು ಸುರಪುರ, ಹುಣಸಗಿ,ಶಹಾಪುರ ಹಾಗೂ ವಡಗೇರಾ ತಾಲೂಕಿನಲ್ಲಿ ಪ್ರವಾಹದಿಂದ ಜನರು ನಿರಾಶ್ರಿತರಾದರೆ ಕಾಳಜಿ ಕೇಂದ್ರದಲ್ಲಿ ಇರಿಸಲು ಜಿಲ್ಲಾಡಳಿತ ಈಗಾಗಲೇ ನಾಲ್ಕು ತಾಲೂಕಿನಲ್ಲಿ ಕಾಳಜಿ ಕೇಂದ್ರ ಗುರುತಿಸುವ ಜೊತೆ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತೆ ವಹಿಸಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಮಾತನಾಡಿ, ಯಾವುದೇ ಕ್ಷಣದಲ್ಲಿ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಬಹುದು ಈಗಾಗಲೇ ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿಕೊಂಡು ಕಾಳಜಿ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ.ಜನರು ನದಿ ಹಾಗೂ ಹಳ್ಳಕೊಳ್ಳಗಳ ಪಾತ್ರಕ್ಕೆ ಹೋಗದೆ ಸುರಕ್ಷಿತವಾಗಿರಬೇಕೆಂದರು.
Comments are closed.